ಮಂಡ್ಯ: ಚುನಾವಣೆಗೆ ಎರಡು ದಿನ ಇರುವಾಗ ಅವರ ಕಡೆಯವರೇ ಕಲ್ಲು ಹೊಡೆಸಿಕೊಂಡು ನಮ್ಮ ಮೇಲೆ ಹಾಕಲು ಯತ್ನಿಸ್ತಿದ್ದಾರೆ ಎನ್ನುವ ಸಿಎಂ ಹೇಳಿಕೆಗೆ ಸುಮಲತಾ ಕಿಡಿಕಾರಿದ್ದಾರೆ.
ಕೆ. ಆರ್ ಪೇಟೆಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಒಬ್ಬ ಮುಖ್ಯಮಂತ್ರಿ ಆದವರು ಹೇಗೆಲ್ಲಾ ಮಾತನಾಡುತ್ತಿದ್ದಾರೆ. ನಿಜವಾಗಲೂ ಕಲ್ಲು ಹೊಡೆಸಿ ನಮ್ಮ ಮೇಲೆಯೇ ಗೂಬೆ ಕೂರಿಸಲು ಈ ತರಹದ ಹೇಳಿಕೆ ನೀಡಿದ್ದಾರೆ ಅನಿಸುತ್ತದೆ. ಸಿಎಂ ಅವರ ಈ ಹೇಳಿಕೆಗಳಿಂದ ನನಗೆ ಭಯವಾಗ್ತಿದೆ ಎಂದು ಹೇಳಿದರು.
ದರ್ಶನ್, ಯಶ್, ಅಭಿಷೇಕ್ ಮತ್ತು ನಾನು ಪ್ರಚಾರ ಮಾಡುತ್ತಿರುತ್ತೇವೆ. ಕಲ್ಲು ತೂರುತ್ತಾರೆ ಎನ್ನುವ ಸಿಎಂ ಹೇಳಿಕೆಯಿಂದ ನಮಗೆ ಭಯವಾಗಿದೆ. ಏಕೆಂದರೆ ಮಾಧ್ಯಮದವರ ಮೇಲೆ ಯಾರಾದರೂ ಹಲ್ಲೆ ನಡೆಸಿದರೆ ನಾವು ಹೊಣೆಯಲ್ಲ ಎಂದು ಹೇಳುತ್ತಾರೆ. ಹೀಗಾಗಿ ಎಲೆಕ್ಷನ್ ಕಮೀಷನ್, ಐಜಿ ಮತ್ತು ಎಸ್ಪಿಗೆ ಸಿಎಂ ವಿರುದ್ಧ ದೂರು ನೀಡುವುದಾಗಿ ಸುಮಲತಾ ಹೇಳಿದರು.
ನನಗೆ ತುಂಬಾ ಭಯವಾಗುತ್ತಿದೆ. ಇಲ್ಲಿ ಇರುವ ಪೊಲೀಸರ ಮೇಲೆ ನಂಬಿಕೆ ಇಲ್ಲ. ಹಾಗಾಗಿ ಸಿಆರ್ ಪಿಎಫ್ ರಕ್ಷಣೆ ಒದಗಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಸುಮಲತಾ ತಿಳಿಸಿದರು.