ನವದೆಹಲಿ: ಹತ್ತೊಂಬತ್ತನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಇಂದು ಧರ್ಮಶಾಲಾದಲ್ಲಿ ನಡೆಯುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ (RCB vs PBKS) ತಂಡಗಳು ಸೆಣೆಸಾಟ ನಡೆಸಲಿವೆ.
ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ಆರ್‌ಸಿಬಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸುವ ತವಕದಲ್ಲಿದೆ. ಇತ್ತ ಸತತ ಸೋಲಿನ ಸುಳಿಗೆ ಸಿಲುಕಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಪಡೆ ಈ ಪಂದ್ಯವನ್ನು ಗೆದ್ದು ಪ್ಲೇ ಆಫ್ (IPL Playoffs) ಸನಿಹ ತಲುಪಲು ಎದುರು ನೋಡುತ್ತಿದೆ. ಒಂದು ವೇಳೆ ಇಂದು ಆರ್‌ಸಿಬಿ ವಿರುದ್ಧ ಪಂಜಾಬ್ ಕಿಂಗ್ಸ್ ಸೋತರೆ ಪ್ಲೇ ಆಫ್ ಪ್ರವೇಶಿಸಲು ಯಾವ್ಯಾವ ತಂಡಗಳಿಗೆ ಲಾಭವಾಗಲಿದೆ ಎನ್ನುವ ಲೆಕ್ಕಾಚಾರ ಇಲ್ಲಿದೆ.

11 ಪಂದ್ಯಗಳನ್ನಾಡಿ 12 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 5ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಪಂಜಾಬ್ ಸೋಲು ಲಾಭವಾಗಬಹುದು. ಯಾಕೆಂದರೆ ಪಂಜಾಬ್ ಬಾಕಿಯಿರುವ ಉಳಿದೆರಡೂ ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇ ಆಫ್‌ಗೆ ಪ್ರವೇಶಿಸಲಿದೆ. ಒಂದು ವೇಳೆ ಒಂದು ಪಂದ್ಯವನ್ನು ಗೆದ್ದು ಇನ್ನೊಂದು ಪಂದ್ಯ ಸೋತರೆ ಪಂಜಾಬ್ 15 ಅಂಕಗಳನ್ನು ಗಳಿಸಿದಂತಾಗುತ್ತದೆ. ಇತ್ತ ರಾಜಸ್ಥಾನ್ ತಂಡ ತನ್ನ ಬಾಕಿಯಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯ ಗೆದ್ದರೂ ಕೂಡ 16 ಅಂಕಗಳೊಂದಿಗೆ ಪ್ಲೇ ಆಫ್ ಪ್ರವೇಶಿಸಲಿದೆ.

ಋತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲುವ ಜೊತೆಗೆ ಉತ್ತಮ ರನ್‌ರೇಟ್ ಕೂಡ ಕಾಯ್ದುಕೊಳ್ಳಬೇಕಾಗುತ್ತದೆ. ಆಗ ಮಾತ್ರ ಪ್ಲೇ ಆಫ್ ಪ್ರವೇಶ ಮಾಡಲಿದೆ. ಒಂದು ವೇಳೆ ಒಂದು ಪಂದ್ಯದಲ್ಲಿ ಸೋತು, ರಾಜಸ್ಥಾನ್ ತಂಡ ಬಾಕಿಯಿರುವ ಮೂರೂ ಪಂದ್ಯಗಳಲ್ಲಿ ಗೆದ್ದರೆ ಚೆನ್ನೆöÊ ಪ್ಲೇ ಆಫ್ ಕನಸು ಭಗ್ನವಾಗಲಿದೆ.
ಆರನೇ ಸ್ಥಾನದಲ್ಲಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ಲೇ ಆಫ್ ಹಾದಿ ಕಠಿಣವಾಗಿದೆ. ಮೇಲಿರುವ ಪಂಜಾಬ್, ರಾಜಸ್ಥಾನ್, ಚೆನ್ನೈ ತಂಡಗಳು ಉಳಿದೆಲ್ಲಾ ಪಂದ್ಯಗಳಲ್ಲಿ ಸೋತು, ಕೆಕೆಆರ್ ಉಳಿದಿರುವ ಎರಡೂ ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಪ್ಲೇ ಆಫ್‌ಗೆ ಅವಕಾಶವಿದೆ.

14 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿರುವ ಹೈದರಾಬಾದ್ ತಂಡ ಬಾಕಿಯಿರುವ ಎರಡರ ಪೈಕಿ ಒಂದು ಪಂದ್ಯವನ್ನು ಗೆಲ್ಲಲೇಬೇಕಿದೆ.

