ಜನ ಸಂಕಷ್ಟದಲ್ಲಿದ್ದರೆ, ನೀರೋ ಕ್ರಿಕೆಟ್ ನೋಡ್ತಿದ್ದ: ಸಿಎಂ ವಿರುದ್ಧ ಹೆಚ್‍ಡಿಕೆ ಕಿಡಿ

Public TV
3 Min Read
HD Kumaraswamy 6

ಬೆಂಗಳೂರು: ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಈ ಸಮಯದಲ್ಲಿ ಕರ್ನಾಟಕದ ನೀರೋ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದ ಎಂದು ಮಾಜಿ ಸಿಎಂ ಕುಮಾರಸ್ವಾಮಿ (H.D Kumaraswamy), ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಎಕ್ಸ್‌ನಲ್ಲಿ ಕಿಡಿಕಾರಿದ್ದಾರೆ.

ವಿದ್ಯುತ್ ಕೃತಕ ಅಭಾವ ಸೃಷ್ಟಿ ಸರ್ಕಾರದ್ದೇ ಷಡ್ಯಂತ್ರ, ವಿದ್ಯುತ್ ಅಭಾವ ಉಲ್ಬಣಿಸಿದಷ್ಟೂ ನಿಮಗೆ ಕಲೆಕ್ಷನ್ ಹೆಚ್ಚಾಗುತ್ತದೆ. ಖಾಸಗಿಯವರಿಂದ ಕೈ ತುಂಬಾ ಕಮಿಷನ್ ಎತ್ತಲು ಹೊರಟಿದ್ದೀರಿ. ವಿದ್ಯುತ್ ಕ್ಷಾಮದ ವಾಸ್ತವತೆ ಬಗ್ಗೆ `ಶ್ವೇತಪತ್ರ’ ಹೊರಡಿಸಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಮರಳು ದಂಧೆ ಪ್ರಶ್ನಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ – ನದಿಗೆ ಎಸೆಯಲು ಪ್ಲಾನ್

ವೆಸ್ಟ್ ಎಂಡ್‍ನಲ್ಲಿ ಆಡಳಿತ ನಡೆಸಿಲ್ಲ ಎನ್ನುವ ಗಿರಾಕಿ, ಆವತ್ತು ಮುಖ್ಯಮಂತ್ರಿ ನಿವಾಸವನ್ನೇಕೆ ತೆರವು ಮಾಡಲಿಲ್ಲ? 5 ವರ್ಷ ಸರ್ಕಾರ ಕೊಟ್ಟ ಸಿದ್ದಪುರುಷ ಇನ್ನೊಬ್ಬರ ಹೆಸರಿನಲ್ಲಿ ಬಂಗಲೆ ಪಡೆದು, ಸಾಸಿವೆ ಕಾಳಷ್ಟೂ ಸಂಕೋಚವಿಲ್ಲದೆ ಅದೇ ಜಾಗದಲ್ಲಿ ಹೆಗ್ಗಣವಾಗಿ ಮೈತ್ರಿ ಸರ್ಕಾರಕ್ಕೆ ಕನ್ನ ಕೊರೆದಿದ್ದನ್ನು ಕನ್ನಡಿಗರು ಮರೆತಿಲ್ಲ. ಹೇಳಿದ್ದೇ ಹೇಳುವ ಕಿಸುಬಾಯಿ ದಾಸನಿಗೆ ಗೊತ್ತಿರುವುದು ಎರಡೇ, 1.ವೆಸ್ಟ್ ಎಂಡ್ 2.ಬಿಜೆಪಿ ಬಿ ಟೀಂ ಎಂದು ಅವರು ಟ್ವಿಟ್ಟರ್‍ನಲ್ಲಿ ಕುಟುಕಿದ್ದಾರೆ.

ಡೋಂಗೀ ಸಮಾಜವಾದಿ, ಪುಲ್ ಟೈಂ ಮೀರುಸಾದಿಕ್‍ವಾದಿಗೆ ವೆಸ್ಟ್ ಎಂಡ್ ಸೋಂಕು ಮತ್ತೆ ತಗುಲಿದೆ. ಐ.ಎನ್.ಡಿ.ಐ.ಎ ಕೂಟದ ಸಭೆಯನ್ನು ಇದೇ ವೆಸ್ಟ್ ಎಂಡ್ ಬದಲಿಗೆ ತಮ್ಮ ಸುತ್ತ ಕೆನೆಪದರ, ಒಳಪದರ, ತೆಳುಪದರದಂತೆ ತಲೆ ಎತ್ತಿರುವ `ಪರ್ಸಂಟೇಜ್ ಪಟಾಲಂ’ ಏಳುಸುತ್ತಿನ ಕೋಟೆಯ ವಠಾರದಲ್ಲಿಯೇ ನಡೆಸಬೇಕಿತ್ತು, ಏಕೆ ನಡೆಸಲಿಲ್ಲ? ಆಧುನಿಕ ಭಾರತದ ಈಸ್ಟ್ ಇಂಡಿಯಾ ಕಂಪನಿ ಕಾಂಗ್ರೆಸ್‍ಗೆ (Congress) ಕರ್ನಾಟಕ ಹುಲ್ಲುಗಾವಲಾಗಿದೆ. ಸಿದ್ದಪುರುಷ ಹಾಗೂ ಶೋಕಿಪುರುಷನೇ ಈ ಹುಲ್ಲುಗಾವಲಿನ ಮೇಟಿ. ವಿದ್ಯುತ್ ಕ್ಷಾಮ ಮತ್ತು ಬರದಲ್ಲಿ ಜನರು ಬೆಯುತ್ತಿದ್ದರೆ ದಿನಪೂರ್ತಿ ಕೂತು ಕ್ರಿಕೆಟ್ ನೋಡುವಷ್ಟು ಶೋಕಿದಾರ, ರೋಮ್ ನಗರ ಹೊತ್ತಿ ಉರಿಯುತ್ತಿದ್ದರೆ ನೀರೋ ಪಿಟೀಲು ಬಾರಿಸುತ್ತಿದ್ದ. ಜನ ಸಂಕಷ್ಟದಲ್ಲಿದ್ದರೆ ಕರ್ನಾಟಕದ ನೀರೋ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದ ಎಂದು ತಿವಿದಿದ್ದಾರೆ.

5 ತಿಂಗಳಿಂದ ವಿದ್ಯುತ್ ಉತ್ಪಾದನೆ ಅಲಕ್ಷಿಸಿದ್ದೇಕೆ? ಹಾಹಾಕಾರ ಎದ್ದ ಮೇಲೆ ಅದು ಮಾಡಿದ್ದೇವೆ, ಇದು ಮಾಡಿದ್ದೇವೆ ಎಂದರೆ ಲೋಡ್ ಶೆಡ್ಡಿಂಗ್ ಏಕೆ ಬಂತು? 2013-2018ರಲ್ಲಿ 12,000 ಮೆ.ವ್ಯಾ. ಉತ್ಪಾದಿಸಿದ್ದೇವೆ ಎಂದು ನೀವೇ ಹೇಳಿದ್ದೀರಿ. ಈಗ ಮಳೆ ಕಡಿಮೆಯಾಗಿ ಜಲವಿದ್ಯುತ್ ಉತ್ಪಾದನೆ ಕುಸಿದಿದೆ, ನನಗೂ ಗೊತ್ತಿದೆ. ಅದರಲ್ಲಿ 3,000 ಮೆ.ವ್ಯಾ. ಇಲ್ಲ ಎಂದರೂ ಸಾರ್ವಜನಿಕ ಮತ್ತು ಖಾಸಗಿ ವಲಯ ಸೇರಿ ಒಟ್ಟು 29,000 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಆಗಲೇಬೇಕಿತ್ತು. ಆಗಿಲ್ಲವೇಕೆ? ಏಕಾಏಕಿ ಉತ್ಪಾದನೆ ನಿಲ್ಲಿಸಿದ್ದೇಕೆ? ಜಲವಿದ್ಯುತ್ ಕೈಕೊಡುತ್ತದೆ ಎಂದು ಗೊತ್ತಿದ್ದರೂ ಕಲ್ಲಿದ್ದಲು ಸಂಗ್ರಹ ಯಾಕೆ ಮಾಡಿಲ್ಲ?

ಜಲ ವಿದ್ಯುತ್ ಹೊರತುಪಡಿಸಿ ಇತರೆ ಮೂಲಗಳ ವಿದ್ಯುತ್ ಉತ್ಪಾದನೆಗೂ ಪ್ರಕೃತಿ ಕಾರಣವೋ? ಅಥವಾ ನಿಮ್ಮ `ಕೈ ಚಳಕ’ವೇ ಕಾರಣವೋ? ಸತ್ಯ ಹೇಳಿದರೆ ನನ್ನ ಕಡೆಗೇ ಬೊಟ್ಟು ಮಾಡುತ್ತೀರಿ. ನಿಮ್ಮ ಸಚಿವರನ್ನು ನನ್ನ ಮೇಲೆ ಛೂ ಬಿಡುತ್ತೀರಿ. ಎಷ್ಟು ದಿನ ಈ ನೆಪಗಳ ನಾಜೂಕತನ? ಎಂದು ಅವರು ಬರೆದುಕೊಂಡಿದ್ದಾರೆ.

ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ ನಂತರ ಇಂ`ಧನ’ ಇಲಾಖೆಯಲ್ಲೂ ನೀವು ನಗದೀಕರಣಕ್ಕೆ ನಾಂದಿ ಹಾಡಿದ್ದೀರಿ. ಖರೀದಿ ಖುಷಿಯಲ್ಲಿ ಪರ್ಸಂಟೇಜ್ ಪಟಾಲಂ ಸಂಭ್ರಮಿಸುತ್ತಿದ್ದೀರಿ ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಡಿಕೆಶಿ ಸಲಹೆ ಸರಿಯಾಗಿದೆ: ಕೆಎನ್‌ ರಾಜಣ್ಣ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article