ಚಿಕ್ಕಬಳ್ಳಾಪುರ: ಈಗ ಎಲ್ಲೆಲ್ಲೂ ಕರಾವಳಿಯ ದೈವಾರಾಧನೆಯ ಕಥಾ ಹಂದರದ ʻಕಾಂತಾರʼ ಸಿನಿಮಾದ್ದೇ ಸದ್ದು. ಇದೇ ಹೊತ್ತಲ್ಲಿ ಕಾಂತಾರ ಸಿನಿಮಾದ ಕಥೆಯಂತೆ ಬಯುಲುಸೀಮೆಯ ಅದೊಂದು ಊರಲ್ಲಿ ದೈವಾಂಶ ಸಂಭೂತ ವಿಗ್ರಹಗಳು ಪತ್ತೆಯಾಗಿವೆ. ಮನೆ ಯಜಮಾನನ ಕನಸಲ್ಲಿ ಬರ್ತಿದ್ದ ವಿಗ್ರಹಗಳು ಈಗ ಕಣ್ಣೆದುರಿಗೆ ಕಾಣಿಸಿಕೊಂಡಿದೆ.
ಹೌದು… ಹೀಗೆ ಒಂದೇ ಕಲ್ಲಿನಲ್ಲಿ ನಿಂತ ಭಂಗಿಯಲ್ಲಿರೋ ದೇವರ ವಿಗ್ರಹಗಳು ಪತ್ತೆಯಾಗಿರೋದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊನ್ನಪ್ಪನಹಳ್ಳಿ ಗ್ರಾಮದಲ್ಲಿ. ಗ್ರಾಮದ ಶಿವಕುಮಾರ್ ಮತ್ತು ಬಾಬು ಎಂಬ ಅಣ್ಣ ತಮ್ಮಂದಿರು, ತೋಟದಲ್ಲಿ ಹೊಸ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಮನೆ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯ ಹಂತದಲ್ಲಿದ್ದು, ಮನೆಗೆ ವಿದ್ಯುತ್ ಸಂಪರ್ಕ ನೀಡಲು ಮುಂದಾಗಿದ್ದಾರೆ. ವಿದ್ಯುತ್ ಸಂಪರ್ಕ ನೀಡಲು ಗ್ರೌಂಡಿಂಗ್ ಕೇಬಲ್ ಆಳವಡಿಸಲು ಮನೆಯ ಪಕ್ಕದಲ್ಲೇ ಗುಂಡಿ ಅಗೆಯುವಾಗ ಈ ಕಲ್ಲಿನ ಕೆತ್ತನೆಗಳು ಪತ್ತೆಯಾಗಿವೆ. ಬರಿಗೈಯಲ್ಲಿ ಕಲ್ಲು ಮೇಲೆ ಎತ್ತಲು ಸಾಧ್ಯವಾಗದೇ ಇದ್ದಾಗ ಜೆಸಿಬಿ ಮೂಲಕ ಗುಂಡಿ ತೆಗೆದು ನೋಡಿದಾಗ ದೇವರ ಕೆತ್ತನೆ ಇರುವ ಕಲ್ಲುಗಳನ್ನ ಮೇಲೆತ್ತಲಾಗಿದೆ. ಇದನ್ನೂ ಓದಿ: 14 ದಲಿತ ಕೂಲಿ ಕಾರ್ಮಿಕರನ್ನು ಕೂಡಿ ಹಾಕಿ ಮಾಲೀಕನಿಂದ ಹಲ್ಲೆ- ಮಹಿಳೆಗೆ ಗರ್ಭಪಾತ
ಮನೆ ಯಜಮಾನ ಕುಮಾರ್ ಎಂಬವರಿಗೆ ಮನೆ ಕಟ್ಟುವ ಆರಂಭದಿಂದಲೂ ಕನಸಲ್ಲಿ ಮನೆ ಬಳಿ ಯಾರೋ ಬಂದು ಇರುವಂತೆ ಭಾಸವಾಗುತ್ತಿತ್ತಂತೆ. ಅದು ಈಗ ನಿಜವಾಗಿದೆ ಅಂತಾರೆ. ಸದ್ಯ ಈ ವಿಗ್ರಹಗಳು ಪತ್ತೆಯಾದ ದಿನದಿಂದಲೂ ಮನೆಯಲ್ಲಿ ನೆಮ್ಮದಿ ಮೂಡಿದೆ. ಯಾವುದೇ ಸಮಸ್ಯೆಗಳು ಇಲ್ಲವಾಗಿದೆ ಅಂತ ಸಂತಸ ಹಂಚಿಕೊಂಡಿದ್ದಾರೆ.
ಸದ್ಯ ಪತ್ತೆಯಾಗಿರೋ ವಿಗ್ರಹಗಳು ನಾರಾಯಣ, ಲಕ್ಷ್ಮೀ ರೂಪ ಅಂತಲೇ ಭಾವಿಸಿದ್ದು, ಮನೆ ಮಂದಿಯೆಲ್ಲಾ ನಿತ್ಯ ವಿಶೇಷ ಪೂಜೆ-ಪುನಸ್ಕಾರ ನೇರವೇರಿಸುತ್ತಿದ್ದಾರೆ. ಮನೆ ಮುಂದೆಯೇ ಗುಡಿ ಕಟ್ಟಿ ಪೂಜಿಸೋಕೆ ನಿರ್ಧರಿಸಿದ್ದು, ಗ್ರಾಮದ ಜನ ಸಹ ಪೂಜೆ-ಪುನಸ್ಕಾರಕ್ಕೆ ಮುಂದಾಗಿದ್ದಾರೆ. ಪುರಾತತ್ವ ಇಲಾಖೆಯವರು ಪರಿಶೀಲನೆ ಮಾಡಿ ಸಂಶೋಧನೆ ನಡೆಸಿದರೆ, ಇದು ಯಾವ ವಿಗ್ರಹಗಳು ಎಂಬ ಆಸಲಿ ಸತ್ಯ ತಿಳಿಯಲಿದೆ. ಇದನ್ನೂ ಓದಿ: ಮೊರಾರ್ಜಿ ಶಾಲೆಗಳಲ್ಲಿ ನಡೆದಿದ್ಯಾ ಆರ್‌ಎಸ್‍ಎಸ್ ಶಿಬಿರ..?