– ಅಂಬರೀಶ್ 7ನೇ ತಿಂಗಳ ಪುಣ್ಯತಿಥಿ
– ನಟ ಚಿರಂಜೀವಿಗೆ ಶುಭಾಶಯ
– ಸದ್ಯ ಸಿನಿಮಾ ಬಗ್ಗೆ ಯೋಚಿಸಿಲ್ಲ
ಬೆಂಗಳೂರು: ರಾಕಿಂಗ್ ಸ್ಟಾರ್ ಪುತ್ರಿ ನನಗೂ ಮೊಮ್ಮಗಳೇ. ನಾನು ಈವರೆಗೂ ಮಗುವನ್ನು ನೋಡಿಲ್ಲ. ಒಂದೊಳ್ಳೆಯ ದಿನ ನೋಡಿ ಯಶ್ ಅವರೇ ತನ್ನ ಮಗುವನ್ನ ತೋರಿಸುವುದಾಗಿ ಹೇಳಿದ್ದಾರೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ 7ನೇ ತಿಂಗಳ ಪುಣ್ಯ ತಿಥಿಯಾಗಿದ್ದು, ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಕುಟುಂಬ ಭೇಟಿ ನೀಡಿ ಪೂಜೆ ಸಲ್ಲಿಸಿತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಚಿತ್ರರಂಗಕ್ಕೆ ಕಾಲಿಟ್ಟು 40 ವರ್ಷ ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿರಂಜೀವಿಗೆ ಶುಭಾಶಯ ಕೋರಿದ್ದಾರೆ. ಅವರ ಜೊತೆ 15 ಸಿನಿಮಾಗಳಲ್ಲಿ ನಟಿಸಿದ್ದೇನೆ ಎಂದರು.
ಅಂಬರೀಶ್ ಜೊತೆ ಇದ್ದಂತಹ ಸಮಯವನ್ನ ಮರೆಯೋಕಾಗೊಲ್ಲ. ದಿನ ಕಳೆದಂತೆ ನೆನಪುಗಳು ಹೆಚ್ಚಾಗುತ್ತಿವೆಯೇ ಹೊರತು ಮಾಸುತ್ತಿಲ್ಲ. ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಬಹಳ ಹೆಮ್ಮೆಯ ವಿಷಯವಾಗಿದೆ. 130 ಕೋಟಿ ಜನ ನಮ್ಮನ್ನ ನೋಡಿರುತ್ತಾರೆ. ಮಂಡ್ಯದ ನೀರಿನ ಸಮಸ್ಯೆಯನ್ನು ಜಲಶಕ್ತಿ ಸಚಿವರೊಂದಿಗೆ ಮತ್ತು ಸದಾನಂದ ಗೌಡರ ಜೊತೆ ಚರ್ಚಿಸಿದ್ದೇನೆ. ರೈತರ ಆತ್ಮಹತ್ಯೆ ವಿಚಾರವಾಗಿ ಶಾಶ್ವತ ಪರಿಹಾರ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ಮುಂದಿನ ದಿನಗಳಲ್ಲಿ ಜನತಾ ದರ್ಶನಕ್ಕಾಗಿ ಮಂಡ್ಯದಲ್ಲೇ ಕಚೇರಿ ತೆರೆಯಲಿದ್ದೇನೆ ಎಂದು ತಿಳಿಸಿದರು.
ದೆಹಲಿಯಲ್ಲಿದ್ದರೆ ಮಂಡ್ಯದಲ್ಲಿ ಇಲ್ಲ ಅಂತಾರೆ. ಮಂಡ್ಯಕ್ಕೆ ಬಂದರೆ ಸಂಸತ್‍ಗೆ ಗೈರು ಎಂದು ಹೇಳುತ್ತಾರೆ. ಈ ರೀತಿಯ ಗಾಸಿಪ್‍ಗಳಿಗೆ ಕಿವಿ ಕೊಡಬೇಡಿ. ಅಭಿಷೇಕ್ ಮುಂದಿನ ಚಿತ್ರಕ್ಕೆ ಸಹಿ ಮಾಡಿದ್ದಾನೆ. ಅಧಿಕೃತವಾಗಿ ಅನೌನ್ಸ್ ಮಾಡಲಿದ್ದಾರೆ. ಸದ್ಯಕ್ಕೆ ನಾನು ಸಿನಿಮಾ ಮಾಡುವ ಯೋಚನೆಯಿಲ್ಲ. ಮಂಡ್ಯಕ್ಕಾಗಿ ಕೆಲಸ ಮಾಡುವುದಷ್ಟೇ ನನ್ನ ಉದ್ದೇಶ ಎಂದರು.
ಈ ವೇಳೆ ಪುತ್ರ ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಭಾಗಿಯಾಗಿದ್ದರು.