ತಂದೆ ಹಿಂದೂ, ತಾಯಿ ಮುಸ್ಲಿಂ, ನಾನು ಜಾತ್ಯಾತೀತ ಕುಟುಂಬಕ್ಕೆ ಸೇರಿದ್ದೇನೆ: ಸಮೀರ್ ವಾಂಖೆಡೆ ತೀಕ್ಷ್ಣ ಪ್ರತಿಕ್ರಿಯೆ

Public TV
2 Min Read
sameer wankhede

ಮುಂಬೈ: ನನ್ನ ತಂದೆ ಹಿಂದೂ, ತಾಯಿ ಮುಸ್ಲಿಂ. ನಾನು ಬಹು ಧರ್ಮೀಯ ಮತ್ತು ಜಾತ್ಯಾತೀತ ಕುಟುಂಬಕ್ಕೆ ಸೇರಿದವನು. ನನ್ನ ಪರಂಪರೆಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಮುಂಬೈ ಎನ್‍ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಕರವಾಗಿ ಉತ್ತರ ನೀಡಿದ್ದಾರೆ.

samir 2

ಟ್ವಿಟ್ಟರ್‌ನಲ್ಲಿ ಮಹಾರಾಷ್ಟ್ರದ ಸಚಿವ ಮತ್ತು ಎನ್‍ಸಿಪಿ ನಾಯಕ ನವಾಬ್ ಮಲಿಕ್ ಅವರು ಸಮೀರ್ ಅವರ ತಂದೆಯ ಧರ್ಮದ ಬಗ್ಗೆ ಪ್ರಸ್ತಾಪಿಸಿ ಅವರ ಜನನ ಪ್ರಮಾಣ ಪತ್ರ ಬಿಡುಗಡೆ ಮಾಡಿದ್ದಾರೆ. ಈ ಹಿನ್ನೆಲೆ ಪತ್ರದ ಮೂಲಕ ವಾಂಖೆಡೆ ತೀಕ್ಷ್ಣ ತೀರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸಮೀರ್ ವಾಂಖೆಡೆ ವಿರುದ್ಧ ಲಂಚದ ಆರೋಪ – ತನಿಖೆಗೆ ಸೂಚನೆ

ನನ್ನ ತಂದೆ ಜ್ಞಾನದೇವ್ ಕಚ್ರುಜಿ ವಾಂಖೆಡೆ ಅವರು 2007ರ ಜೂನ್ 30 ರಂದು ಪುಣೆಯ ರಾಜ್ಯ ಅಬಕಾರಿ ಇಲಾಖೆಯ ಹಿರಿಯ ಪೊಲೀಸ್ ಇನ್ಸ್‍ಪೆಕ್ಟರ್ ಆಗಿ ನಿವೃತ್ತರಾದರು. ನನ್ನ ತಂದೆ ಹಿಂದೂ ಮತ್ತು ನನ್ನ ತಾಯಿ ದಿವಂಗತ ಜಹೀದಾ ಮುಸ್ಲಿಂ. ನಾನು ನಿಜವಾದ ಭಾರತೀಯ ಸಂಪ್ರದಾಯದಲ್ಲಿ ನಂಬಿಕೆ ಇಟ್ಟವನು. ನಾನು ಬಹು ಧಾರ್ಮಿಕ ಮತ್ತು ಜಾತ್ಯಾತೀತ ಕುಟುಂಬಕ್ಕೆ ಸೇರಿದ್ದೇನೆ. ನನ್ನ ಪರಂಪರೆಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ವಾಂಖೆಡೆ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅವಶ್ಯಕತೆ ಬಿದ್ದರೆ ಮುಂದಿನ ದಿನಗಳಲ್ಲಿ ಪಠ್ಯ ಕಡಿತ: ಬಿ.ಸಿ.ನಾಗೇಶ್

ಯುಪಿಎಸ್‍ಸಿ ದಾಖಲೆಗಳ ಪ್ರಕಾರ, ವಾಂಖೆಡೆ ತನ್ನ ಪರೀಕ್ಷೆಗೆ ಹಾಜರಾಗಿದ್ದಾಗ ಸಮೀರ್ ಜ್ಞಾಂದೇವ್ ವಾಂಖೆಡೆ ಎಂದು ನಮೂನೆಯನ್ನು ಭರ್ತಿ ಮಾಡಿದ್ದಾರೆ. ಸಚಿವ ನವಾಬ್ ಮಲಿಕ್ ಹಂಚಿಕೊಂಡ ಪ್ರಮಾಣ ಪತ್ರದ ಪ್ರಕಾರ ಸಮೀರ್ ದಾವೂದ್ ವಾಂಖೆಡೆ ಎಂದು ಉಲ್ಲೇಖಿಸಿದೆ.

ಈ ಹಿನ್ನೆಲೆ ಸಮೀರ್, ಟ್ವಿಟ್ಟರ್‍ನಲ್ಲಿ ನನ್ನ ವೈಯಕ್ತಿಕ ದಾಖಲೆಗಳನ್ನು ಪ್ರಕಟಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ದಾಖಲೆ ಬಿಡುಗಡೆ ಮಾಡುವುದು ಮಾನಹಾನಿಕರ ಸ್ವರೂಪ ಮತ್ತು ನನ್ನ ಕುಟುಂಬದ ಗೌಪ್ಯತೆಯ ಮೇಲೆ ಅನಗತ್ಯದ ಆಕ್ರಮಣವಾಗಿದೆ. ಇದು ನನ್ನನ್ನು, ನನ್ನ ಕುಟುಂಬ, ನನ್ನ ತಂದೆ ಮತ್ತು ನನ್ನ ದಿವಂಗತ ತಾಯಿಯನ್ನು ನಿಂದಿಸುವ ಉದ್ದೇಶವನ್ನು ಹೊಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *