ಮಧ್ಯರಾತ್ರಿ ಸಾಮಾನ್ಯ ಮಹಿಳೆಯಂತೆ ರಸ್ತೆಯಲ್ಲಿ ಓಡಾಡಿದ ಮಹಿಳಾ ಪೊಲೀಸ್‌ – 3 ಗಂಟೆಯಲ್ಲಿ 40 ಪುರುಷರಿಂದ ಕಿರುಕುಳ

1 Min Read

– ಮಹಿಳೆಯರು ಎಷ್ಟು ಸುರಕ್ಷಿತ ಅಂತ ತಿಳಿಯಲು ಮುಂದಾದ ಪೊಲೀಸ್‌ ಆಯುಕ್ತೆಗೆ ಶಾಕ್

ಹೈದರಾಬಾದ್: ರಾತ್ರಿ ವೇಳೆ ಮಹಿಳೆಯರು ಎಷ್ಟು ಸುರಕ್ಷಿತ ಎಂಬುದನ್ನು ಪರೀಕ್ಷಿಸಲು ಮುಂದಾದ ಮಹಿಳಾ ಪೊಲೀಸ್ ಕೊನೆಗೆ ತಾವೇ ಶಾಕ್ ಆಗಿದ್ದಾರೆ. ಸಾಮಾನ್ಯ ಮಹಿಳೆಯಂತೆ ಉಡುಗೆ ತೊಟ್ಟು ರಸ್ತೆಯಲ್ಲಿ ಓಡಾಡಿದ ಅವರಿಗೆ ಕೇವಲ 3 ಗಂಟೆ ಅವಧಿಯಲ್ಲಿ 40 ಪುರುಷರು ಕಿರುಕುಳ ನೀಡಿದ್ದಾರೆ.

ಹೈದರಾಬಾದ್‌ನ ಮಲ್ಕಜ್‌ಗಿರಿಯ ಪೊಲೀಸ್ ಆಯುಕ್ತೆ ಸುಮತಿ, ನಗರದ ಬೀದಿಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಸುರಕ್ಷತಾ ಸವಾಲುಗಳನ್ನು ತಿಳಿಯಲು ಮಧ್ಯರಾತ್ರಿ ಒಬ್ಬಂಟಿಯಾಗಿ ಓಡಾಡಿದ್ದರು. ಸಾಮಾನ್ಯ ಮಹಿಳೆಯಂತೆ ಉಡುಪು ಧರಿಸಿ, ಪೊಲೀಸರ ಸಹಾಯವಿಲ್ಲದೇ ಅವರು ಮಧ್ಯರಾತ್ರಿ 12:30 ರಿಂದ 3:30 ರವರೆಗೆ ಬಸ್ ನಿಲ್ದಾಣ ಬಳಿ ಒಬ್ಬರೇ ಓಡಾಡಿದ್ದರು.

ನಂತರ ನಡೆದ ಘಟನೆಗಳಿಗೆ ಮಹಿಳಾ ಪೊಲೀಸ್ ಶಾಕ್ ಆಗಿದ್ದಾರೆ. ಮೂರು ಗಂಟೆಗಳಲ್ಲಿ ಸುಮಾರು 40 ಪುರುಷರು ಆಕೆಯನ್ನು ಲೈಂಗಿಕ ಚಟುವಟಿಕೆಗೆ ಆಹ್ವಾನಿಸಿದ್ದಾರೆ. ಅವರಲ್ಲಿ ಹಲವರು ಕುಡಿದಿರುವಂತೆ ಕಂಡರು. ಇನ್ನೂ ಕೆಲವರು ಗಾಂಜಾ ವ್ಯಸನಿಗಳಂತೆ ಕಂಡುಬಂದರು. ಅರ‍್ಯಾರಿಗೂ ತಾವು ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡುತ್ತಿದ್ದೇವೆಂದು ತಿಳಿದಿರಲಿಲ್ಲ.

ನಾವು ದೂರುಗಳು ಮತ್ತು ವರದಿಗಳನ್ನು ಮಾತ್ರ ಅವಲಂಬಿಸಬಾರದು. ವಾಸ್ತವಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಅದಕ್ಕಾಗಿ ಇಂತಹ ಕಾರ್ಯಾಚರಣೆಗಳನ್ನು ನಡೆಸಬೇಕು ಎಂದು ಪೊಲೀಸ್ ಆಯುಕ್ತೆ ತಿಳಿಸಿದ್ದಾರೆ.

ರಾತ್ರಿ ವೇಳೆ ಅನುಚಿತವಾಗಿ ವ್ಯಕ್ತಿಗಳನ್ನು ಗುರುತಿಸಿ, ಅವರನ್ನು ಕೌನ್ಸೆಲಿಂಗ್‌ ನಡೆಸಲಾಯಿತು. ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ ಕಳುಹಿಸಲಾಯಿತು. ಪೊಲೀಸ್‌ ಆಯುಕ್ತೆಯ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Share This Article