ದಾವಣಗೆರೆ: ಮದುವೆಯಾಗಿ 6 ತಿಂಗಳಾಗಿದ್ದು ಗರ್ಭಿಣಿ ಪತ್ನಿಯ (Pregnant Wife) ಶೀಲ ಶಂಕಿಸಿದ ಪತಿ ಆಕೆಯ ಕೊಲೆ (Murder) ಮಾಡಿ ದಟ್ಟ ಕಾಡಿನ ಮಧ್ಯೆ ಹೂತಿಟ್ಟು ವಿಕೃತಿ ಮೆರೆದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ ತಾಲೂಕಿನ ಗಂಗಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಮಹಿಳೆ ರಶ್ಮಿ (20) ಎಂದು ಗುರುತಿಸಲಾಗಿದೆ. ಮದುವೆ ಅಂದರೇನು, ಸಂಸಾರ ಅಂದರೇನು ಎಂಬುದನ್ನು ತಿಳಿದುಕೊಳ್ಳಲು ಹೆಚ್ಚು ಸಮಯ ಸಿಗದೇ ಮಹಿಳೆ ಪತಿಯ ಪೈಶಾಚಿಕ ಕೃತ್ಯಕ್ಕೆ ಬಲಿಯಾಗಿದ್ದಾಳೆ. ದಾವಣಗೆರೆ ತಾಲೂಕಿನ ಐಗೂರು ಗ್ರಾಮದ ಲೋಕೇಶಪ್ಪ, ರತ್ನಮ್ಮ ದಂಪತಿಯ ಕೊನೆಯ ಪುತ್ರಿ ರೇಷ್ಮಾಳನ್ನು ಚನ್ನಗಿರಿ ತಾಲೂಕಿನ ಗಂಗಗೊಂಡನಹಳ್ಳಿಯ ಮೋಹನ್ ಕುಮಾರ್ ಅಲಿಯಾಸ್ ಮನು ಜೊತೆ ಏಪ್ರಿಲ್ 13 ರಂದು ಅದ್ದೂರಿಯಾಗಿ ವಿವಾಹ ಮಾಡಿ ಕೊಡಲಾಗಿತ್ತು.
Advertisement
Advertisement
ಮದುವೆಯಾದ 1 ತಿಂಗಳ ಬಳಿಕ ಪತ್ನಿ ಗರ್ಭಿಣಿಯಾದ ವಿಚಾರ ಗೊತ್ತಾಗಿದ್ದು, ಮೋಹನ್ ಅವಳ ಮೇಲೆ ಅನುಮಾನ ಪಟ್ಟಿದ್ದಾನೆ. ರಶ್ಮಿ ಯಾರ ಜೊತೆ ಮಾತನಾಡಿದರೂ ಅನುಮಾನ ಪಡುತ್ತಿದ್ದ ಮೋಹನ್ ತನ್ನ ಪತ್ನಿಯ ಶೀಲ ಶಂಕಿಸಿ ಪದೇ ಪದೇ ಜಗಳವಾಡುತ್ತಿದ್ದ. ಈ ಬಗ್ಗೆ ರಶ್ಮಿ ಸಾಕಷ್ಟು ಬಾರಿಗೆ ಪಾಲಕರ ಗಮನಕ್ಕೂ ತಂದಿದ್ದು, ರಾಜೀ ಸಂಧಾನ ನಡೆಸಿ ಸರಿಪಡಿಸುತ್ತಿದ್ದರು. ಆದರೆ ಅನುಮಾನ ಹೆಚ್ಚಾಗಿ ತಿಂಗಳ ಮೊದಲೇ ಪ್ಲಾನ್ ಮಾಡಿ ಮೋಹನ್ ತನ್ನ ಪತ್ನಿಯನ್ನು ಕೊಲೆ ಮಾಡಿ ಹೂತು ಹಾಕಿದ್ದಾನೆ.
Advertisement
ತಿಂಗಳ ಹಿಂದೆಯೇ ಹತ್ಯೆಗೆ ಪ್ಲಾನ್:
ರಶ್ಮಿಯನ್ನು ಕೊಲೆ ಮಾಡೋದಕ್ಕೆ ಫಿಕ್ಸ್ ಆಗಿದ್ದ ಮೋಹನ್ ತಿಂಗಳ ಮೊದಲೇ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕು ಸಮೀಪದ ಶಿರಗಲಿಪುರ ಕಣಿವೆ ಬಳಿ ಗುಂಡಿ ತೋಡಿ ಗುರುತು ಮಾಡಿ ಹೋಗಿದ್ದ. ಅಕ್ಟೋಬರ್ 8 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ರಶ್ಮಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮಧ್ಯರಾತ್ರಿ ಕಾರಿನಲ್ಲಿ ಮೃತ ದೇಹ ಕೊಂಡೊಯ್ದು ತಾನು ತೆಗೆದಿದ್ದ ಗುಂಡಿಯಲ್ಲಿ ಹೂತಿಟ್ಟು ಬಂದಿದ್ದ. ಅಂದೇ ರಾತ್ರಿ 2 ಗಂಟೆ ಸುಮಾರಿಗೆ ಆಕೆಯ ಮನೆಯವರಿಗೆ ಕರೆ ಮಾಡಿ ರಶ್ಮಿ ಕಾಣಿಸುತ್ತಿಲ್ಲ. ಎಲ್ಲಿ ಹೋಗಿದ್ದಾಳೋ ಗೊತ್ತಿಲ್ಲ ಎಂದು ನಾಟಕವಾಡಿದ್ದಾನೆ.
Advertisement
ತವರು ಮನೆಯವರು ಬಂದಾಗ ನಿಮ್ಮ ಮಗಳು ಯಾರ ಜೊತೆಯಲ್ಲೋ ಓಡಿ ಹೋಗಿದ್ದಾಳೆ ಎಂದು ಮೋಹನ್ ಮತ್ತೆ ನಾಟಕ ಶುರು ಮಾಡಿದ್ದ. ಅಲ್ಲದೆ ಗ್ರಾಮ ದೇವರ ಮೂರ್ತಿ ತಲೆ ಮೇಲೆ ಪ್ರಮಾಣ ಮಾಡಿ ನಾನು ಕೊಲೆ ಮಾಡಿಲ್ಲ, ಅವಳು ಎಲ್ಲಿ ಹೋಗಿದ್ದಾಳೋ ಗೊತ್ತಿಲ್ಲ ಎಂದು ಹೇಳಿದ್ದಾನೆ. ಕೊನೆಗೆ ರಶ್ಮಿ ಸಂಬಂಧಿಕರ ಒತ್ತಾಯದ ಮೇರೆಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ಕೊಟ್ಟಿದ್ದಾನೆ. ಆದರೆ ರಶ್ಮಿ ಪಾಲಕರಿಗೆ ಮೋಹನ್ ಮೇಲೆ ಅನುಮಾನವಿದ್ದ ಕಾರಣ ಅವನ ಮೇಲೆ ದೂರು ದಾಖಲು ಮಾಡಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಆತಂಕದ ನಡುವೆ ಮಂಗ್ಳೂರಿನ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆ
ಪೊಲೀಸರು ತನಿಖೆ ನಡೆಸಿದ ವೇಳೆ ಮೋಹನ್ ಕೃತ್ಯ ಬಯಲಾಗಿದೆ. ಮೋಹನ್ ಪತ್ನಿಯ ಶವವನ್ನು ಎಲ್ಲಿ ಹೂತಿಟ್ಟಿದ್ದ ಎಂಬುದನ್ನು ಖಚಿತ ಪಡಿಸಿಕೊಂಡ ಪೊಲೀಸರು ಇಂದು ಮೃತ ದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸ್ಥಳಕ್ಕೆ ಅಜ್ಜಂಪುರ ತಾಹಶೀಲ್ದಾರ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಆಗಮಿಸಿದ್ದಾರೆ.
ಮಗಳನ್ನು ಇಷ್ಟು ಬೇಗ ಮದುವೆ ಮಾಡಿಕೊಟ್ಟು ಸ್ಮಾಶಾನಕ್ಕೆ ಕಳುಹಿಸಿದೆವು ಎಂದು ರಶ್ಮಿ ಕುಟುಂಬಸ್ಥರು ಆಕ್ರಂದಿಸಿದ್ದಾರೆ. ಹೊಟ್ಟೆ ಬಟ್ಟೆ ಕಟ್ಟಿ ಸಾಕಿ ಸಲಹಿದ್ದ ಮುದ್ದಾದ ಮಗಳು ಕಟುಕನ ಕೈಯಲ್ಲಿ ಬಲಿಯಾಗಿದ್ದು, ಮೋಹನ್‌ಗೆ ಕಠಿಣ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸ್ವಂತ ಮಗಳನ್ನ ಗುಂಡಿಕ್ಕಿ ಕೊಂದು, ಸೂಟ್‌ಕೇಸ್‌ನಲ್ಲಿ ಬಿಸಾಡಿದ ತಂದೆ