ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ – 4,000 ಜನರ ಸ್ಥಳಾಂತರ

Public TV
1 Min Read
Fire Accident Dubai UAE

ದುಬೈ: ಮರೀನಾದಲ್ಲಿರುವ 67 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಶುಕ್ರವಾರ ತಡರಾತ್ರಿ ಮರಿನಾದ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಆ ಕಟ್ಟಡದಲ್ಲಿದ್ದ ಸುಮಾರು 4,000 ಜನರನ್ನು ಯಾವುದೇ ತೊಂದರೆಯಾಗದಂತೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

35ನೇ ಮಹಡಿಯ ಕಟ್ಟಡ ಒಣಗಿದ ಮರದಂತೆ ಹೊತ್ತಿ ಉರಿದಿದೆ. ಇದರಿಂದ ಇಡೀ ನಗರಾದ್ಯಂತ ಹೊಗೆ ಆವರಿಸಿತ್ತು. ಇಂತಹ ಅಗ್ನಿ ದುರಂತವನ್ನು ರಕ್ಷಣಾ ತಂಡಗಳು ಜಾಗರೂಕತೆಯಿಂದ ನಿಭಾಯಿಸಿವೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

ರಕ್ಷಣಾ ತಂಡಗಳು ಆರು ಗಂಟೆಗಳ ಕಾಲ ನಿರಂತರವಾಗಿ ಶ್ರಮಿಸಿ ಬೆಂಕಿಯನ್ನು ನಂದಿಸಿದವು. ಅವಘಡದಿಂದ ಸಮಸ್ಯೆಗೊಳಗಾದವರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲು ಅಧಿಕಾರಿಗಳು ಸಭೆ ನಡೆಸಿದ್ದಾರೆ.

ಟೈಗರ್ ಟವರ್ ಎಂದು ಕರೆಯಲ್ಪಡುವ ಮರೀನಾ ಪಿನಾಕಲ್‌ ಕಟ್ಟಡದಲ್ಲಿ ಮೇ 2015 ರಲ್ಲಿ ಸಹ ಅಗ್ನಿ ಅವಘಡ ಸಂಭವಿಸಿತ್ತು. ಆಗ 47 ನೇ ಮಹಡಿಯಲ್ಲಿ ಬೆಂಕಿ ತಗುಲಿ 48 ನೇ ಮಹಡಿಗೂ ವ್ಯಾಪಿಸಿತ್ತು.

Share This Article