– ಮಹಿಳೆಯ ಜೀವ ರಕ್ಷಣೆಗೆ ಪಣತೊಟ್ಟ ವೈದ್ಯರ ತಂಡ
ಹುಬ್ಬಳ್ಳಿ: ಒಂದು ಜೀವ ಉಳಿಯಬೇಕಾದರೆ ಇನ್ನೂಂದನ್ನು ಕಳೆದುಕೊಳ್ಳಲೇ ಬೇಕಾದ ಪರಿಸ್ಥಿತಿ ಬಹಳ ಸಂಕಷ್ಟವನ್ನು ತಂದೊಡ್ಡುತ್ತದೆ. ಅಂತಹದೇ ಒಂದು ಪರಿಸ್ಥಿತಿ ಬಾಗಲಕೋಟೆ ಮೂಲದ ಗರ್ಭಿಣಿ ಮಹಿಳೆಗೆ ಬಂದೊದಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದ 23 ವರ್ಷದ 5 ತಿಂಗಳ ಗರ್ಭಿಣಿ ಕೋವಿಡ್ 19 ಸೋಂಕು ದೃಢಪಟ್ಟು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಇವರ ಆರೋಗ್ಯದ ದೃಷ್ಟಿಯಿಂದ ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಲು ಕಿಮ್ಸ್ ಆಸ್ಪತ್ರೆಯ ವೈದ್ಯರು ಮುಂದಾಗಿದ್ದಾರೆ.
ಕೋರೊನಾ ವೈರಸ್ ದೃಢಪಟ್ಟಿರುವ ಗರ್ಭಿಣಿಯ ಪತಿ ಸೇರಿದಂತೆ ಕುಟುಂಬದವರೆಲ್ಲ ಸರ್ಕಾರಿ ಕ್ವಾರಂಟೈನ್‍ನಲ್ಲಿದ್ದಾರೆ. ಅವರ್ಯಾರು ಇದೀಗ ಇಲ್ಲಿಲ್ಲ. ಹೀಗಾಗಿ ಮೊಬೈಲ್ ಮೂಲಕ ಅವರನ್ನೆಲ್ಲ ಸಂಪರ್ಕಿಸಿ ವೈದ್ಯರು ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಗರ್ಭಿಣಿ ಮಹಿಳೆಯು ಕಿಮ್ಸ್‍ಗೆ ದಾಖಲಾದ ಆರಂಭದ ದಿನಗಳಲ್ಲಿ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಮೇಲಿಂದ ಮೇಲೆ ಆರೋಗ್ಯದಲ್ಲಿ ಬದಲಾವಣೆಯಾಗುತ್ತಿರುವ ಕಾರಣ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವ ಬದಲು ಪರಿಣಾಮಕಾರಿಯಾದ ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಲು ನಿರ್ಧರಿಸಿದ್ದಾರೆ. ಅಲ್ಲದೇ ಆರೋಗ್ಯದಲ್ಲಿ ಏರುಪೇರುಗಳಾಗಿ ಯಾವುದೇ ಅವಘಡ ಸಂಭವಿಸಬಾರದೆಂದು ವೈದ್ಯರು ಗರ್ಭಪಾತಕ್ಕೆ ಮುಂದಾಗಿದ್ದಾರೆ.
ಗರ್ಭಿಣಿಯ ದೇಹದಲ್ಲಿ ಸೋಡಿಯಂ ಅಂಶ ಕಡಿಮೆಯಾಗಿ, ಸುಸ್ತು ಹೆಚ್ಚಾಗುತ್ತಿತ್ತು. ಅಲ್ಸರ್ ಆಗಿರುವುದರಿಂದ ಊಟ ಕೂಡ ಮಾಡಲು ಆಗುತ್ತಿಲ್ಲ. ಅವರನ್ನು ನೋಡಿಕೊಳ್ಳಲು ಕುಟುಂಬದವರು ಯಾರೂ ಇಲ್ಲದ ಕಾರಣ ಸಮಸ್ಯೆಯಾಗುತ್ತಿದೆ. ಮಹಿಳೆ ಈಗ ನಮ್ಮ ಸುಪರ್ದಿಯಲ್ಲಿರುವ ಕಾರಣ ವೈದ್ಯಕೀಯ ಸಿಬ್ಬಂದಿಯೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ. ಸಿಬ್ಬಂದಿ ಮನೆಯಿಂದಲೇ ರವೆ ಮತ್ತು ರಾಗಿ ಗಂಜಿ ತಂದು ನೀಡುತ್ತಿರುವುದಾಗಿ ಕಿಮ್ಸ್ ವೈದ್ಯಕೀಯ ಅಧೀಕ್ಷಕ ಅರುಣ್ ಕುಮಾರ್ ತಿಳಿಸಿದರು.
ಮಹಿಳೆಯ ದೇಹದಲ್ಲಿ ಹಿಮೊಗ್ಲೋಬಿನ್ ಅಂಶ ಐದರಷ್ಟಿತ್ತು. ಆದ್ದರಿಂದ ರಕ್ತವನ್ನು ಕೊಟ್ಟಿದ್ದೇವೆ. ಹೇಗಾದರೂ ಮಾಡಿ ಅವರನ್ನು ಉಳಿಸಿಕೊಳ್ಳಲೇಬೇಕು ಎನ್ನುವ ಗುರಿಯಿಂದ ನಿರಂತರ ಚಿಕಿತ್ಸೆ ಮುಂದುವರಿಸಿದ್ದೇವೆ. ಗುರುವಾರ ಹಣ್ಣಿನ ಜ್ಯೂಸ್ ಕುಡಿದಿದ್ದು, ಬಿಪಿ ಸಮತೋಲನಕ್ಕೆ ಬಂದಿದೆ. ಆದ್ದರಿಂದ ಮಗುವಿನ ಪ್ರಾಣಕ್ಕಿಂತ ತಾಯಿಯ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿದ್ದೇವೆ ಎಂದು ಹೇಳಿದರು.
ಸರಿಯಾಗಿ ಮೂತ್ರ ಹೋಗದ ಕಾರಣ ಡಯಾಲಿಸಿಸ್ ಮಾಡುವ ಬಗ್ಗೆಯೂ ಚಿಂತನೆ ನಡೆದಿತ್ತು. ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದ ಕಾರಣ ಆ ವಿಚಾರ ಈಗ ಕೈಬಿಟ್ಟಿದ್ದೇವೆ. ಪರಿಣಾಮಕಾರಿಯಾದ ಮಾತ್ರೆಗಳ ಮೂಲಕವೇ ಮಗುವಿನ ಗರ್ಭಪಾತ ಮಾಡಲು ನಿರ್ಧರಿಸಿದ್ದೇವೆ. ಆದರೆ ಯಾವಾಗ ಮಾತ್ರೆಗಳನ್ನು ಕೊಡುವುದು ಎಂದು ತೀರ್ಮಾನವಾಗಿಲ್ಲ ಎಂದರು.