ನನ್ನಿಂದ 50 ಸಾವಿರ ಸಾಲ ಪಡೆದಿದ್ದ ಹೆಬ್ಬಾಳ್ಕರ್ 500 ಕೋಟಿ ಹೇಗೆ ಸಂಪಾದನೆ ಮಾಡಿದ್ರು: ಸಂಜಯ್ ಪಾಟೀಲ್

Public TV
3 Min Read
Sanjay Patil

ಬೆಳಗಾವಿ: 20 ವರ್ಷಗಳ ಹಿಂದೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನನ್ನ ಬಳಿ 50 ಸಾವಿರ ರೂ. ಹಣ ಪಡೆದಿದ್ದರು. ಇಂದು ಅವರು 500 ಕೋಟಿ ರೂ. ಮಾಲೀಕರು ಹೇಗೆ ಆಗ್ತಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ (BJP) ಮಾಜಿ ಶಾಸಕ ಸಂಜಯ್ ಪಾಟೀಲ್ (Sanjay Patil) ಪ್ರಶ್ನೆಯಿಟ್ಟಿದ್ದಾರೆ.

ಸಂಜಯ್ ಪಾಟೀಲ್ ರಾಜಹಂಸಗಡ ಕೋಟೆ ಬಳಿಯ ಮಣ್ಣು ಮಾರಿದ್ದಾರೆ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಕ್ಕೆ ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಹೆಬ್ಬಾಳ್ಕರ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಏನಾದರೂ ದಾಖಲೆ ಕೊಟ್ಟರೆ ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ತಿರುಗೇಟು ನೀಡಿದರು,

LAXMI HEBBALKAR SANJAY PATIL

20 ವರ್ಷಗಳ ಹಿಂದೆ ನಾನು ರಾಜಕೀಯದಲ್ಲಿ ಇರಲಿಲ್ಲ. ಅವರೂ ಸಕ್ರಿಯ ರಾಜಕಾರಣದಲ್ಲಿ ಇರಲಿಲ್ಲ. ಅಂದು ಅವರು ಗೋಮಟೇಶ್ ವಿದ್ಯಾಪೀಠದ ನನ್ನ ಕಚೇರಿಗೆ ಬಂದಿದ್ದರು. ಆಗ 50 ಸಾವಿರ ರೂ. ನನಗೆ ಸಹಾಯ ಮಾಡಿ ಎಂದು ಕೇಳಿ ಹೋಗಿದ್ದರು. ಆ ಸಮಯ ನನ್ನಿಂದ 50 ಸಾವಿರ ರೂ. ತೆಗೆದುಕೊಂಡು ಹೋದವರು ವಾಪಾಸ್ ಬರಲೇ ಇಲ್ಲ ಎಂದು ಆರೋಪಿಸಿದರು.

ಅಂದು ನನ್ನ ಕಡೆಯಿಂದ 50 ಸಾವಿರ ರೂ. ಸಾಲ ತೆಗೆದುಕೊಂಡು ಹೋಗುವಂತಹ ಸ್ಥಿತಿಯಲ್ಲಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಈಗ 500 ಕೋಟಿ ರೂ. ಮಾಲೀಕರು ಹೇಗೆ ಆಗ್ತಾರೆ? ಅವತ್ತೇ ಸಂಜಯ್ ಪಾಟೀಲ್ ನಿಮಗೆ 50 ಸಾವಿರ ರೂ. ಸಾಲ ಕೊಟ್ಟಿದ್ದಾನೆ. ಅವನಿಗೆ ದುಡ್ಡಿನ ಅವಶ್ಯಕತೆ ಇಲ್ಲ. ಮಣ್ಣು ಮಾರುವಂತಹ ಬಡತನ ಬಂದಿಲ್ಲ. ಸಂಜಯ್ ಪಾಟೀಲ್‌ಗೆ ಕೊಂಡು ತೆಗೆದುಕೊಳ್ಳೋ, ಎರಡು ನಂಬರ್ ಬ್ಯುಸಿನೆಸ್ ಮಾಡುವಂತಹ ಆಶೀರ್ವಾದ ದೇವರು ನನಗೆ ಮಾಡಿಲ್ಲ. ನಾನು ಲಕ್ಷ್ಮಿ ಪುತ್ರ ಎಂಬುದು ನನಗೆ ಗೊತ್ತಿದೆ. ದುಡ್ಡಿನ ಸಲುವಾಗಿ ಸಗಣಿ ತಿನ್ನುವಂತಹ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ತಿರುಗೇಟು ನೀಡಿದರು.

SANJAY PATIL

ಆ ಮಣ್ಣು ಮಾರೋಕೆ ನಾನು ರಾಜಹಂಸಗಡ ಕೆಲಸ ಪ್ರಾರಂಭ ಮಾಡಿರಲಿಲ್ಲ. ಶಿವಾಜಿ ಮಹಾರಾಜರನ್ನು ದೇವರು ಎಂದು ಪೂಜೆ ಮಾಡುತ್ತೇನೆ. ಆ ಶಿವಾಜಿ ಮಹಾರಾಜರ ಸ್ಮಾರಕ ಮಾಡಲು ಆ ಕೆಲಸ ಪ್ರಾರಂಭ ಮಾಡಿದ್ದೇನೆ. ನಾನು ಕೊಟ್ಟ 50 ಸಾವಿರ ರೂ. ವಾಪಸ್ ಕೊಟ್ಟಿಲ್ಲ. ಅದಕ್ಕೂ ಆಣೆ ಮಾಡಲಿ ಬರಲಿ ಅವರು. ಮಳೇಕರಣಿ ದೇವಿ ಅಲ್ಲ, ಅವರಿಗೆ ಯಾವ ದೇವರ ಮೇಲೆ ಭಕ್ತಿ ಇದೆ, ಆ ದೇವರ ಕಡೆ ಬರಬೇಕು. ಸಂಜಯ್ ಪಾಟೀಲ್ ಬಳಿ 50 ಸಾವಿರ ರೂ. ಪಡೆದಿಲ್ಲ ಎಂದು ಆಣೆ ಮಾಡಬೇಕು. ನನಗೆ ಅವಶ್ಯಕತೆ ಇದೆ ಸಹಾಯ ಮಾಡಿ ಎಂದು 50 ಸಾವಿರ ರೂ. ಕೊಡಿ ಎಂದಿದ್ದರು. 2 ಗಂಟೆ ನನ್ನ ಕಚೇರಿಯಲ್ಲಿ ಕುಳಿತು ಹಣ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.

ಸಂಜಯ ಪಾಟೀಲ್ ಗೋಮಟೇಶ್ ವಿದ್ಯಾಪೀಠಕ್ಕೆ ಶಾಸಕರ ಅನುದಾನದ 40 ಲಕ್ಷ ರೂ. ಹಣ ಪಡೆದ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವಲ್ಪ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಅದರ ಬಗ್ಗೆ ಅಭ್ಯಾಸ ಮಾಡಿ ಹೇಳಬೇಕು. ಗೋಮಟೇಶ್ ವಿದ್ಯಾಪೀಠಕ್ಕೆ ತೆಗೆದುಕೊಂಡಿದ್ದೇವೋ ಇಲ್ಲವೋ, ಹಣ ವಾಪಾಸ್ ಆಗಿದೆಯೋ ಇಲ್ಲವೋ ಅಂತ. ಗೋಮಟೇಶ್ ವಿದ್ಯಾಪೀಠದ ಹಣ ಉಪಯೋಗ ಆಗಿದೆಯೋ ಇಲ್ಲವೋ ಅದರ ಬಗ್ಗೆ ತಿಳಿದುಕೊಳ್ಳಬೇಕು. ಆ ಬಳಿಕ ನಾನು ಯಾವಾಗ ಬೇಕಾದರೂ ಉತ್ತರಿಸಲು ವೇದಿಕೆ ಮೇಲೆ ಬರುತ್ತೇನೆ ಎಂದರು.

Lakshmi Hebbalkar

ಅವರು ಸುಳ್ಳು ಆರೋಪ ಮಾಡುವುದನ್ನು ಬಿಡಬೇಕು. ಯಾವ ವಿಚಾರ ಬಂದರೂ ದಾಖಲೆ ತೆಗೆದುಕೊಂಡು ಬರಬೇಕು. ನೀವು 10 ವರ್ಷ ಎಂಎಲ್‌ಎ ಆಗಿದ್ದು, 20 ಕೋಟಿ ರೂ. ಶಾಸಕರ ಅನುದಾನ ಬಂದಿತ್ತು. ಶಿವಾಜಿ ಮೂರ್ತಿ ಏಕೆ ಪ್ರತಿಷ್ಠಾಪಿಸಿಲ್ಲ ಎಂದು ಕೇಳಿದ್ರು. ನಾನು ಶಿವಾಜಿ ಮೂರ್ತಿ ಸಲುವಾಗಿ ಎಂಎಲ್‌ಎ ಫಂಡ್ ನೀಡುವಂತೆ ಡಿಸಿಗೆ ಪತ್ರ ಬರೆದಿದ್ದೇನೆ. ಅದಕ್ಕೆ ಅದು ಪ್ರೊವಿಜಿನ್ ಇಲ್ಲ, ಕೊಡೋಕೆ ಆಗಲ್ಲ ಎಂದು ಡಿಸಿ ಉತ್ತರಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ತೆರೆದ ವಾಹನದಲ್ಲಿ ಎಚ್‌ಡಿಡಿ 100 ಕಿ.ಮೀ. ರೋಡ್ ಶೋ

ಎಂಎಲ್‌ಎ ಫಂಡ್ ಯಾವ್ಯಾವ ಕೆಲಸಕ್ಕೆ ಉಪಯೋಗ ಮಾಡಬೇಕು ಎಂಬ ಜ್ಞಾನ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಬೇಕಲ್ಲ. ಎಂಎಲ್‌ಎ ಫಂಡ್ ಯಾವ್ಯಾವ ಕಾಮಗಾರಿಗಳಿಗೆ ಕೊಡಬೇಕು ಅಂತಾ ಕಾನೂನು ಇದೆ. ಆ ಕಾನೂನು ಬಿಟ್ಟು ಮಾಡೋಕೆ ಆಗಲ್ಲ. ಸುಮ್ಮನೆ ಭಾಷಣ ಏನೇನೋ ಮಾಡೋದು, ಜನರಿಗೆ ಸುಳ್ಳು ಹೇಳಿ ಮೋಸ ಮಾಡುವ ಸ್ವಭಾವವನ್ನು ಲಕ್ಷ್ಮಿ ಹೆಬ್ಬಾಳ್ಕರ್ ಹೊಂದಿದ್ದಾರೆ ಎಂದು ಕಿಡಿ ಕಾರಿದರು.

lakshmi hebbalkar 1

ಶಾಸಕಿ ಅಂದ್ರೆ ಏನು? ಶಾಸಕರ ಅಧಿಕಾರ ಏನಿದೆ? ಇದರ ಬಗ್ಗೆ ಅವರು ಅಧ್ಯಯನ ಮಾಡಬೇಕು. ನಾನು ರಾಜಹಂಸಗಡ ಕೋಟೆ ಅಭಿವೃದ್ಧಿ ಕೆಲಸ ಪ್ರಾರಂಭ ಮಾಡಿದ್ದ ದಾಖಲೆಗಳಿವೆ. ಅವರಿಗೆ ಬಹಳ ಸಲ ವಿನಂತಿ ಮಾಡಿದ್ದೇನೆ. ಅವರು ಕೇವಲ ಭಾಷಣ ಮಾಡುತ್ತಿದ್ದಾರೆ. ಸರ್ಕಾರಿ ದಾಖಲಾತಿಗಳೊಂದಿಗೆ ಅವರು ಉತ್ತರಿಸಲು ಪ್ರಾರಂಭ ಮಾಡಬೇಕು. ಅಲ್ಲಿ ಎಲ್ಲಾದರೂ ತಪ್ಪಿದ್ದರೆ ನಾನು ಕ್ಷಮೆ ಕೇಳೋಕೆ ರೆಡಿ ಎಂದು ಸಂಜಯ್ ಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ: HDK ಕುಟುಂಬದಿಂದ ದೇವರ ಮೊರೆ – ಚಂಡಿಕಾ ಯಾಗ, ಮಹಾಮೃತ್ಯುಂಜಯ ಜಪ ಆಯೋಜನೆ

Share This Article
Leave a Comment

Leave a Reply

Your email address will not be published. Required fields are marked *