ಮನೆಯಲ್ಲೇ ಹೋಟೆಲ್ ಶೈಲಿಯ ಮೃದುವಾದ ತಂದೂರಿ ರೊಟ್ಟಿಯನ್ನು (Tandoori Roti) ಯಾವುದೇ ತಂದೂರ್ ಅಥವಾ ಓವನ್ ಇಲ್ಲದೆ, ಕೇವಲ ಕಾವಲಿಯಲ್ಲೇ ಸುಲಭವಾಗಿ ಮಾಡಬಹುದು. ಕಡಿಮೆ ಸಮಯದಲ್ಲಿ, ಅತ್ಯಂತ ಕಡಿಮೆ ಪದಾರ್ಥಗಳೊಂದಿಗೆ ರೆಸ್ಟೋರೆಂಟ್ ಶೈಲಿಯ ಸುವಾಸನೆ ಮತ್ತು ರುಚಿಯನ್ನು ಪಡೆಯಲು ಸರಳ ವಿಧಾನ ಇಲ್ಲಿದೆ.


ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು
ಮೊಸರು
ಸಕ್ಕರೆ
ಉಪ್ಪು
ಬೇಕಿಂಗ್ ಪೌಡರ್
ಅಡುಗೆ ಸೋಡಾ
ಎಣ್ಣೆ ಅಥವಾ ತುಪ್ಪ
ಉಗುರು ಬೆಚ್ಚಗಿನ ನೀರು
ಬೆಣ್ಣೆ/ತುಪ್ಪ

ಮಾಡುವ ವಿಧಾನ:
ಒಂದು ಅಗಲವಾದ ಪಾತ್ರೆಯಲ್ಲಿ ಗೋಧಿ ಹಿಟ್ಟು, ಉಪ್ಪು, ಸಕ್ಕರೆ, ಬೇಕಿಂಗ್ ಪೌಡರ್ ಮತ್ತು ಅಡುಗೆ ಸೋಡಾವನ್ನು ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಮೊಸರು ಮತ್ತು ಸ್ವಲ್ಪ ಎಣ್ಣೆ ಸೇರಿಸಿ, ಉಗುರು ಬೆಚ್ಚಗಿನ ನೀರನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೆತ್ತಗೆ ನಾದಿಕೊಳ್ಳಿ.
ನಾದಿದ ಸ್ವಲ್ಪ ಎಣ್ಣೆ ಸವರಿ, ಒಂದು ಒದ್ದೆ ಬಟ್ಟೆಯಿಂದ ಮುಚ್ಚಿ ಬೆಚ್ಚಗಿನ ಸ್ಥಳದಲ್ಲಿ 2 ರಿಂದ 3 ಗಂಟೆಗಳ ಕಾಲ ಇಡಿ. ಹೀಗೆ ಮಾಡುವುದರಿಂದ ರೊಟ್ಟಿ ಹೋಟೆಲ್‌ನಲ್ಲಿ ಸಿಗುವಂತೆ ತುಂಬಾ ಮೃದುವಾಗಿ ಬರುತ್ತದೆ. ಹಿಟ್ಟು ಉಬ್ಬಿದ ನಂತರ, ಅದನ್ನು ಇನ್ನೊಮ್ಮೆ ಚೆನ್ನಾಗಿ ನಾದಿ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ. ಲಟ್ಟಣಿಗೆಯಿಂದ ಸ್ವಲ್ಪ ದಪ್ಪವಾಗಿ (ಸಾಮಾನ್ಯ ಚಪಾತಿಗಿಂತ ದಪ್ಪ) ವೃತ್ತಾಕಾರದಲ್ಲಿ ಲಟ್ಟಿಸಿಕೊಳ್ಳಿ. ರೊಟ್ಟಿಯ ಒಂದು ಬದಿಗೆ ಸ್ವಲ್ಪ ನೀರನ್ನು ಸವರಿ, ನೀರು ಸವರಿದ ಭಾಗವನ್ನು ಕಾದಿರುವ ಕಾವಲಿಯ ಮೇಲೆ ಹಾಕಿ ಒತ್ತಿ. ಸಣ್ಣ ರಂಧ್ರಗಳು ಕಾಣಿಸಿಕೊಂಡಾಗ, ಕಾವಲಿಯನ್ನು ಉಲ್ಟಾ ಮಾಡಿ ನೇರವಾಗಿ ಗ್ಯಾಸ್ ಜ್ವಾಲೆಯ ಮೇಲೆ ಹಿಡಿದು ಎಲ್ಲಾ ಕಡೆ ಬೇಯಿಸಿ.
ಚೆನ್ನಾಗಿ ಬೇಯ್ದ ನಂತರ ಕೊನೆಯಲ್ಲಿ ಬಿಸಿ ರೊಟ್ಟಿಯ ಮೇಲೆ ಸ್ವಲ್ಪ ಬೆಣ್ಣೆ ಅಥವಾ ತುಪ್ಪ ಸವರಿ ಸವಿಯಿರಿ.

