– ಆಡಳಿತಾತ್ಮಕ ವೆಚ್ಚ ಕಡಿತಗೊಳಿಸಲು ಸರ್ಕಾರದ ಪ್ರಯತ್ನ
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ (Himachal Pradesh) ಆಡಳಿತಾತ್ಮಕ ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳ ಕ್ಯಾಡರ್ ಬಲವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರದ (Central Govt) ಸಿಬ್ಬಂದಿ ಇಲಾಖೆಗೆ ರಾಜ್ಯ ಸರ್ಕಾರ (State Govt) ಪತ್ರ ಬರೆದಿದೆ.
ರಾಜ್ಯದ ಪ್ರಸ್ತುತ 153 ಐಎಎಸ್ ಹುದ್ದೆಗಳನ್ನು 130ಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಇದೇ ರೀತಿ ಐಎಫ್‌ಎಸ್ ಹುದ್ದೆಗಳನ್ನು 118ರಿಂದ 83ಕ್ಕೆ ಕಡಿತಗೊಳಿಸಲು ಹಾಗೂ ಐಪಿಎಸ್ ಕ್ಯಾಡರ್‌ನ್ನೂ 96 ಹುದ್ದೆಗಳಷ್ಟು ಕಡಿಮೆ ಮಾಡುವ ಪ್ರಸ್ತಾವವಿದೆ. ಇದನ್ನೂ ಓದಿ:ಇಮ್ರಾ ನ್ ಖಾನ್ ಆರೋಗ್ಯ ಹದಗೆಡುತ್ತಿದೆ, ಕೂಡಲೇ ಆಸ್ಪತ್ರೆಗೆ ದಾಖಲಿಸಿ: ಪಾಕ್ ಸುಪ್ರೀಂ ಆದೇಶ
ಈ ಕುರಿತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು (Sukhvinder Singh Sukhu) ಅವರು, ಅಧಿಕಾರಿಗಳ ಸಂಖ್ಯೆ ಅಗತ್ಯಕ್ಕಿಂತ ಹೆಚ್ಚಿರಬಾರದು. ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯವಿರುವಷ್ಟು ಅಧಿಕಾರಿಗಳೇ ಸಾಕು. ವೈಯಕ್ತಿಕವಾಗಿ ಐಎಎಸ್ ಅಧಿಕಾರಿಗಳ ಸಂಖ್ಯೆಯನ್ನು 100ರಿಂದ 110ರೊಳಗೆ ಇರಿಸುವುದು ತಮ್ಮ ಅಭಿಪ್ರಾಯವಾಗಿತ್ತು. ಆದರೆ ಕೆಲವು ಅಧಿಕಾರಿಗಳ ಅಸಮಾಧಾನದ ಹಿನ್ನೆಲೆ 130ಕ್ಕೆ ಇಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಅಧಿಕಾರಿಗಳ ಕ್ಯಾಡರ್ ಕಡಿತದಿಂದ ಆಡಳಿತಾತ್ಮಕ ವೆಚ್ಚ ಕಡಿಮೆಯಾಗಲಿದ್ದು, ಉಳಿಯುವ ಹಣವನ್ನು ಜನರ ಸೇವೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದು. ಒಬ್ಬ ಅಧಿಕಾರಿಯ ಸಂಖ್ಯೆಯನ್ನು ಕಡಿಮೆ ಮಾಡುವುದರಿಂದ ಸರ್ಕಾರಕ್ಕೆ ಸುಮಾರು 200 ಕೋಟಿ ರೂ. ಉಳಿತಾಯವಾಗಲಿದೆ ಎಂಬುದು ಸಿಎಂ ಸುಖವಿಂದರ್ ಅವರ ಲೆಕ್ಕಾಚಾರ.ಇದನ್ನೂ ಓದಿ: ಒಕ್ಕೂಟ ವ್ಯವಸ್ಥೆಯಲ್ಲಿ ಬೇರೆ ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಸಲ್ಲದು: ಡಿ.ಕೆ ಶಿವಕುಮಾರ್
ಕೇಂದ್ರ ನಿಯೋಜನೆಗೆ ಅಧಿಕಾರಿಗಳಿಗೆ ತಕ್ಷಣ ಅನುಮತಿ:
ಕೇಂದ್ರ ಸರ್ಕಾರದ ನಿಯೋಜನೆಗೆ ತೆರಳುವ ಅಧಿಕಾರಿಗಳ ಕಡತಗಳನ್ನು ಈ ಹಿಂದೆ ತಡೆಹಿಡಿಯಲಾಗುತ್ತಿತ್ತು. ಆದರೆ ಇದೀಗ ಅಂತಹ ಅಧಿಕಾರಿಗಳಿಗೆ ತಕ್ಷಣ ಅನುಮತಿ ನೀಡಿ ಬಿಡುಗಡೆ ಮಾಡಲಾಗುತ್ತಿದೆ. ಹಿಮಾಚಲ ಕ್ಯಾಡರ್‌ನ 25 ಐಎಎಸ್ ಮತ್ತು 24 ಐಪಿಎಸ್ ಅಧಿಕಾರಿಗಳು ಪ್ರಸ್ತುತ ಕೇಂದ್ರ ನಿಯೋಜನೆಯಲ್ಲಿದ್ದಾರೆ. 118 ಐಎಫ್‌ಎಸ್ ಅಧಿಕಾರಿಗಳ ಪೈಕಿ 17 ಮಂದಿ ಕೇಂದ್ರ ನಿಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದರ ಜೊತೆಗೆ ಆಡಳಿತಾತ್ಮಕ ವೆಚ್ಚ ಕಡಿಮೆ ಮಾಡಲು ಫೀಲ್ಡ್ ಅಧಿಕಾರಿಗಳಿಗೆ ಲಭ್ಯವಿರುವ ಸರ್ಕಾರಿ ವಾಹನಗಳ ಸಂಖ್ಯೆಯನ್ನೂ 56 ರಿಂದ 30ಕ್ಕೆ ಇಳಿಸಲು ಸರ್ಕಾರ ಮುಂದಾಗಿದೆ. ಸರ್ಕಾರಿ ವಾಹನಗಳನ್ನು ಹಂತ ಹಂತವಾಗಿ ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವ ಯೋಜನೆಯೂ ಇದೆ.ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಶೀಘ್ರವೇ ಬಿಜೆಪಿ ಬರಗಾಲ ಅಧ್ಯಯನ ವರದಿ ಸಲ್ಲಿಕೆ: ಎನ್.ರವಿಕುಮಾರ್

