ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಕಳೆದ ಎರಡು-ಮೂರು ದಿನಗಳಿಂದ ಮಳೆಯ ಆರ್ಭಟ ಹೆಚ್ಚಾಗಿದೆ. ಜಿಲ್ಲೆಯ ಹಲವೆಡೆ ರಾತ್ರಿ ವೇಳೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆ ಚುರುಕುಗೊಂಡಿದೆ. ಇದರ ಪರಿಣಾಮವಾಗಿ ಹಾರಂಗಿ ಜಲಾಶಯಕ್ಕೆ (Harangi Dam) ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ.
ಹೌದು, ಕುಶಾಲನಗರ ತಾಲೂಕು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ರಾತ್ರಿ ವೇಳೆಯಲ್ಲಿ ಸುರಿಯುತ್ತಿರುವ ಮಳೆ ಹಾರಂಗಿ ಜಲಾಶಯದ ಒಳಹರಿವಿನ ಪ್ರಮಾಣವನ್ನೂ ಹೆಚ್ಚಿಸಿದೆ. ಕಳೆದ ಕೆಲವು ದಿನಗಳಿಂದ 500ರಿಂದ 600 ಕ್ಯೂಸೆಕ್ನಷ್ಟಿದ್ದ ಒಳಹರಿವು, ಸತತ ಮಳೆಯ ಪರಿಣಾಮ ಇದೀಗ 2,812 ಕ್ಯೂಸೆಕ್ಗೆ ಏರಿಕೆಯಾಗಿದೆ. 8.5 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಹಾರಂಗಿ ಜಲಾಶಯದಲ್ಲಿ ಪ್ರಸ್ತುತ 4.3 ಟಿಎಂಸಿ ನೀರು ಸಂಗ್ರಹವಾಗಿದೆ. ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪಮಾನ ಏರಿಕೆ ಹಾಗೂ ನೀರಿನ ಲಭ್ಯತೆಯ ಕೊರತೆಯಿಂದ ಜನರು ಆತಂಕಕ್ಕೊಳಗಾಗಿದ್ದರು. ಅದರಲ್ಲೂ ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ನೀರಿನ ಸಮಸ್ಯೆ ಎದುರಾಗಬಹುದೆಂಬ ಭೀತಿ ಎದುರಾಗಿತ್ತು. ಇದನ್ನೂ ಓದಿ: ಶಿವಮೊಗ್ಗ ದಸರಾದಲ್ಲಿ ಅಂಬಾರಿ ಆನೆ ರಂಪಾಟ – ಅಧಿಕಾರಿಗಳಿಗೆ ಕ್ಲೀನ್ಚಿಟ್
ಆದರೆ, ಇದೀಗ ಸುರಿಯುತ್ತಿರುವ ಮಳೆ ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾದರೆ ಜಲಾಶಯದ ಒಳಹರಿವು ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಇನ್ನೊಂದೆಡೆ, ಉತ್ತಮ ಮಳೆಯ ನಡುವೆಯೂ ಜಿಲ್ಲೆಯ ಕೆಲವೆಡೆ ಮಳೆಯಿಂದಾಗಿ ವಿವಿಧ ಅವಾಂತರಗಳು ಮುಂದುವರಿದಿವೆ. ಒಟ್ಟಿನಲ್ಲಿ, ಕೊಡಗಿನಲ್ಲಿ ಚುರುಕುಗೊಂಡಿರುವ ಮಳೆ ಹಾರಂಗಿ ಜಲಾಶಯದ ನೀರಿನ ಮಟ್ಟ ಹೆಚ್ಚಳಕ್ಕೆ ಕಾರಣವಾಗಿದ್ದು, ಬೇಸಿಗೆಯ ನೀರಿನ ಬವಣೆಯ ಆತಂಕದಲ್ಲಿದ್ದ ಜನರಿಗೆ ಸದ್ಯಕ್ಕೆ ಕೊಂಚ ನಿರಾಳತೆ ತಂದಿದೆ. ಇದನ್ನೂ ಓದಿ: ಸೇಡಂ | ಕಮಲಾವತಿ ನದಿಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ
