ಮಡಿಕೇರಿ: ರಾಜ್ಯಕ್ಕೆ ಮುಂಗಾರು ಪೂರ್ವ ಮಳೆ (Rain) ಅಧಿಕೃತವಾಗಿ ಪ್ರವೇಶ ಪಡೆದಿದ್ದು, ಕೊಡಗು (Kodagu) ಜಿಲ್ಲೆಯಲ್ಲಿ ಈಗಾಗಲೇ ಆಗೊಮ್ಮೆ ಈಗೊಮ್ಮೆ ಸಾಧಾರಣ ಮಳೆ ಸುರಿಯುತ್ತಿದೆ. ಆದರೆ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಸಹಜವಾಗಿಯೇ ಅದು ವಿಪರೀತವಾಗಿ ಸುರಿಯುತ್ತದೆ.
ಒಂದು ವೇಳೆ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದೇ ಆದಲ್ಲಿ ನದಿ ಪಾತ್ರದ ಜನರಿಗೆ ಮತ್ತೆ ಕಂಟಕ ಮಾತ್ರ ತಪ್ಪಿದ್ದಲ್ಲ. ಹೀಗಾಗಿ ಕೊಡಗು ಜಿಲ್ಲಾಡಳಿತ ಮಳೆಗಾಲವನ್ನು ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಲ್ಲದೇ ಗ್ರಾಮ ಪಂಚಾಯಿತಿಯಿಂದ ನದಿ ಪಾತ್ರದ ಜನರಿಗೆ ನೋಟಿಸ್ ಒಂದು ನೀಡಿದ್ದು, ಅದು ಜನಾಕ್ರೋಶಕ್ಕೆ ಕಾರಣವಾಗಿದೆ.
Advertisement
Advertisement
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ನದಿಪಾತ್ರದ ಜನರಿಗೆ ಸಿದ್ದಾಪುರ ಗ್ರಾಮ ಪಂಚಾಯಿತಿಯಿಂದ ಜನರು ಸುರಕ್ಷಿತ ಸ್ಥಳಗಳಿಗೆ, ಸಂಬಂಧಿಕರ ಮನೆಗಳಿಗೆ ತೆರಳುವಂತೆ ನೋಟಿಸ್ ನೀಡಿದೆ. ಆದರೆ ಪರ್ಯಾಯ ವ್ಯವಸ್ಥೆಗಳನ್ನೇ ಮಾಡದೆ ನೋಟಿಸ್ ನೀಡಿರುವುದಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ.
Advertisement
Advertisement
ಕಳೆದ ಹಲವು ವರ್ಷಗಳಿಂದ ಪ್ರವಾಹ ಸಂತ್ರಸ್ತರಿಗೆ ಇನ್ನೂ ಮನೆಗಳು ವಿತರಣೆಯಾಗಿಲ್ಲ. ಹೀಗಿರುವಾಗಲೂ ಪರ್ಯಾಯ ವ್ಯವಸ್ಥೆ ಮಾಡದೆ ಗ್ರಾಮದ ನೂರಾರು ಕುಟುಂಬಗಳ ಮನೆಗಳ ಮುಂದೆ ನೋಟಿಸ್ ಅಂಟಿಸಿರುವ ಕ್ರಮಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷವೂ ಇಲಾಖೆಗಳಿಗೆ ಒಂದು ನೋಟಿಸ್ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಪ್ರತಿ ಮಳೆಗಾಲ ಬಂದರೆ ಸಾಕು ಕಾಳಜಿ ಕೇಂದ್ರಕ್ಕೆ ಹೋಗುತ್ತೇವೆ. ನಂತರ ಮನೆಗಳಿಗೆ ಬಂದರೆ ಮನೆಯಲ್ಲಿ ಇರುವ ವಸ್ತುಗಳು ಪಾತ್ರೆಗಳು ಕಾವೇರಿ ನದಿಯಲ್ಲೇ ಹೋಗಿರುತ್ತದೆ. ವರ್ಷ ವರ್ಷ ನಮಗೆ ಹೋಸ ವಸ್ತುಗಳು ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಶಾಶ್ವತವಾದ ಒಂದು ಸೂರು ಕೊಡಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕರಡಿಗೋಡು ಹಾಗೂ ಗುಹ್ಯ ಗ್ರಾಮದಲ್ಲಿ ಕಾವೇರಿ ಪ್ರವಾಹಕ್ಕೆ ನೂರಾರು ಮನೆಗಳು ತುತ್ತಾಗುತ್ತಿದೆ. ಅಲ್ಲದೇ 2019-20 ರಲ್ಲಿ ಈ ಭಾಗದಲ್ಲಿ ಹಲವಾರು ಮನೆಗಳು ಸಂಪೂರ್ಣವಾಗಿ ಕಾವೇರಿ ನದಿಯ ಪ್ರತಾಪಕ್ಕೆ ಒಳಗಾಗಿ ಮನೆಗಳು ನಾಶವಾಗಿದ್ದವು. ಈ ಸಂದರ್ಭದಲ್ಲಿ ಅಂದಿನ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಈ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ಗ್ರಾಮದ ಜನರಿಗೆ ಸುರಕ್ಷಿತ ಸ್ಥಳದಲ್ಲಿ ಒಂದು ಸೂರು ಕೊಡಿ ಎಂದು ಆಗ್ರಹಿಸಿದ್ದರು. ಇದೀಗ ಅವರೇ ಮುಖ್ಯಮಂತ್ರಿ ಆಗಿರುವುದರಿಂದ ಇಲ್ಲಿನ ಗಂಭೀರ ಸಮಸ್ಯೆಯ ಬಗ್ಗೆ ಅವರಿಗೆ ಅರಿವು ಇರುವುದರಿಂದ ಅವರಾದರೂ ಸೂರು ಕೊಡಬಹುದು ಎಂದು ಇಲ್ಲಿನ ಜನರು ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: ಜೂನ್ 1ಕ್ಕೆ ನಡೆಯಬೇಕಿದ್ದ ಕ್ಯಾಬಿನೆಟ್ ಸಭೆ ಶುಕ್ರವಾರಕ್ಕೆ ಹೋಗಿದ್ದು ಯಾಕೆ?
ಇತ್ತ ಸಿದ್ದಾಪುರ ಗ್ರಾಮ ಪಂಚಾಯತಿ ಪಿಡಿಒ ಅವರನ್ನು ಕೇಳಿದರೆ, ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ನದಿ ಪಾತ್ರದ ಜನರಿಗೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದರಲ್ಲೂ ಗುಹ್ಯ ಗ್ರಾಮದಲ್ಲಿ ಸುಮಾರು 78 ಜನರು ಹಾಗೂ ಕರಡಿಗೋಡು ಗ್ರಾಮದಲ್ಲಿ 115 ಕುಟುಂಬಗಳು ವಾಸ ಮಾಡುತ್ತಿದೆ. ಮಳೆ ಹೆಚ್ಚಾದರೆ ಮನೆಗಳು ಬೀಳುವ ಪರಿಸ್ಥಿತಿ ಇರುವುದರಿಂದ ಅವರಿಗೆ ಮನೆ ಖಾಲಿ ಮಾಡಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಪಂಚಾಯಿತಿಯಿಂದ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಒಂದೆಡೆ ಜಿಲ್ಲಾಡಳಿತ ಮಳೆಗಾಲವನ್ನು ಎದುರಿಸಲು ಸಂಪೂರ್ಣ ಸಿದ್ಧತೆ ನಡೆಸಿದೆ ಎನ್ನುತ್ತಿದೆ. ಆದರೆ ಕಳೆದ ಬಾರಿಯ ಕಾವೇರಿ ನದಿ ಪಾತ್ರದ ಸಂತ್ರಸ್ತರಿಗೆ ಯಾವುದೇ ಬದಲಿ ವ್ಯವಸ್ಥೆ ಮಾಡದೆ, ಕೇವಲ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: 174 ಶಾಲೆಗಳಲ್ಲಿ ಕುಡಿಯಲೂ ನೀರಿಲ್ಲ – ಮಳೆಯಾಗುವ ತನಕ ಅರ್ಧ ದಿನ ಶಾಲೆ ತೆರೆಯಲು ಸರ್ಕಾರಕ್ಕೆ ಮನವಿ