ಬೆಂಗಳೂರು: ತಡರಾತ್ರಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಕಾರ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ರಾಜ್ಯದ ಹಲವೆಡೆ ಮುಂಗಾರು ಮಳೆ ಆರ್ಭಟಿಸುತ್ತಿದೆ. ಭಾರೀ ಗಾಳಿ, ಗುಡುಗು-ಸಿಡಿಲಿನ ಸಮೇತ ಮಳೆ ಸುರಿದಿದೆ. ಮಳೆಯಿಂದಾಗಿ ನಗರದ ಏರ್‍ಪೋರ್ಟ್‍ನಲ್ಲಿ ಪ್ಲಾಸ್ಟಿಕ್ ತಡೆಗೋಡೆಗಳು ಚೆಲ್ಲಾಪಿಲ್ಲಿ ಆಗಿವೆ. ಮೆಜೆಸ್ಟಿಕ್, ಮಲ್ಲೇಶ್ವರಂ, ಸದಾಶಿವನಗರ, ಹೆಬ್ಬಾಳ, ಯಲಹಂಕ, ಯಶವಂತಪುರ, ಶೇಷಾದ್ರಿಪುರಂ, ಕೆ.ಆರ್. ಮಾರ್ಕೆಟ್ ಬಳಿ ಭಾರೀ ಮಳೆ ಆಗಿದೆ. ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡುವಂತಾಗಿತ್ತು. ನೆಲಮಂಗಲದಲ್ಲಿ ವಿದ್ಯುತ್ ಕಂಬ ಉರುಳಿಬಿದ್ದಿದೆ. ಇದನ್ನೂ ಓದಿ: ಮುಂಗಾರು ಮಳೆಯ ಆರ್ಭಟ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು, ಕೆರೆಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ
ಕೊಪ್ಪಳ ಜಿಲ್ಲಾದ್ಯಂತ ಗುಡುಗು – ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಯಲಬುರ್ಗಾ ತಾಲೂಕು ಚಿಕ್ಕಮ್ಯಾಗೇರಿ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ದೇವಮ್ಮ ಮುದೇನೂರು (55), ರೇಷ್ಮಾ ಚಲವಾದಿ (27) ಸಿಡಿಲಿಗೆ ಬಲಿಯಾಗಿದ್ದಾರೆ. ಮೂವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಯಲಬುರ್ಗಾ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಮತ್ತೊಂದೆಡೆ ಬೆಳಗಾವಿಯ ಹುಕ್ಕೇರಿ ತಾಲೂಕಿನ ಮದಹಳ್ಳಿಯಲ್ಲಿ ಬಿರುಗಾಳಿ ಮಳೆಗೆ ಮನೆ, ಕೊಟ್ಟಿಗೆಯ ಮೇಲ್ಛಾವಣಿಗಳು ಹಾರಿ ಹೋಗಿವೆ. ಗದಗದ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಬಳಿ ಮಳೆ ಬಂದ ಹಿನ್ನೆಲೆ ಜಮೀನಿನಲ್ಲಿ ಮರದ ಕೆಳಗೆ ನಿಂತಿದ್ದ ಮೂವರು ಯುವಕರಿಗೆ ಸಿಡಿಲು ಬಡಿದು ಗಾಯಗಳಾಗಿದೆ. ಇದೀಗ ಗಾಯಗೊಂಡ 22 ವರ್ಷದ ಸಂಗಪ್ಪ ಇಟಗಿ, 24 ವರ್ಷದ ಜಗದೀಶ್ ಹೊಸಳ್ಳಿ, 25 ವರ್ಷದ ಪ್ರಶಾಂತ್ ಮಲ್ಲಾಪುರ ಅವರನ್ನು ರೋಣಾ ತಾಲೂಕಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಟೋಲ್ ಪ್ಲಾಜಾ ನೌಕರರ ಮೇಲೆ ಬಿಜೆಪಿ ಮುಖಂಡನ ಗೂಂಡಾ ವರ್ತನೆ
ಚಿತ್ರದುರ್ಗದ ಚಳ್ಳಕೆರೆ ಪಟ್ಟಣದ ನೆಹರು ವೃತ್ತದ ಜಲಾವೃತವಾಗಿತ್ತು. ತಗಡಿನ ಶೀಟ್‍ಗಳು ಉರುಳಿ ರಸ್ತೆ ಬದಿ ನಿಲ್ಲಿಸಿದ್ದ ಬೈಕ್‍ಗಳು, ಆಟೋಗಳು ಜಖಂ ಆಗಿದೆ. ಕೋಲಾರ ಜಿಲ್ಲೆಯ ಮುಳಬಾಗಲು, ಶ್ರೀನಿವಾಸಪುರ, ಕೆಜಿಎಫ್, ಕೋಲಾರ ತಾಲೂಕಿನ ಹಲವೆಡೆ ಮಳೆ ಆಗಿದೆ.