– ದಕ್ಷಿಣ ಕನ್ನಡದಲ್ಲೂ ಅಬ್ಬರಿಸುತ್ತಿರುವ ವರುಣ
ಮಡಿಕೇರಿ/ಮಂಗಳೂರು: ಮುಂಜಾನೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ (Rain) ಕೊಡಗು (Kodagu) ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಿಸಿದೆ.
ಕರಿಕೆ, ಚೆಂಬು, ಸಂಪಾಜೆ, ನಾಪೋಕ್ಲು ಮತ್ತು ಭಾಗಮಂಡಲ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಪರಿಣಾಮ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಭಾಗಮಂಡಲ ಹಾಗೂ ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದೆ. ಕ್ಷಣಕ್ಕೂ ಕ್ಷಣಕ್ಕೂ ಕಾವೇರಿ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದ್ದು ಈ ರಸ್ತೆಯ ಮೇಲೆ 3 ಅಡಿಗಳಷ್ಟು ನೀರು ಹರಿಯುತ್ತಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುರಿಯುತ್ತಿರುವ ಮಳೆಯಿಂದಾಗಿ ಕೆಆರ್‍ಎಸ್‍ಗೆ ಅಪಾರ ಪ್ರಮಾಣದ ನೀರು ಹರಿದು ಬರುವ ನಿರೀಕ್ಷೆ ಇದೆ. ಇದನ್ನೂ ಓದಿ: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯ ಅವಾಂತರ – ಕಾಳಜಿ ಕೇಂದ್ರ ತೆರೆದ ಜಿಲ್ಲಾಡಳಿತ
ಭಾಗಮಂಡಲ ನಾಪೋಕ್ಲು ರಸ್ತೆಯಲ್ಲಿ ನೀರು ಹರಿಯುತ್ತಿರುವ ಹಿನ್ನೆಲೆ ಮಡಿಕೇರಿ ತಹಶಿಲ್ದಾರ್ ಕಿರಣ್ ಗೋರಯ್ಯ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರಸ್ತೆ ದಾಟಲು ಬೋಟ್ ವ್ಯವಸ್ಥೆ ಮಾಡುವ ಭರವಸೆ ಕೋಡ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ರಸ್ತೆಗೆ ಹೋಂ ಗಾಡ್ರ್ಸ್ ನಿಯೋಜನೆ ಮಾಡಲು ಸೂಚನೆ ನೀಡಿದ್ದಾರೆ.
ಭಾರೀ ಗಾಳಿ ಮಳೆಗೆ ಮನೆ ಮೇಲೆ ಮರ ಹಾಗೂ ಬೃಹತ್ ವಿದ್ಯುತ್ ಕಂಬ ಮುರಿದು ಬಿದ್ದಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ಮರಿಯ, ಲಲಿತ ಮತ್ತು ಐಸಮ್ಮ ಎಂಬುವರ ಮನೆಗಳಿಗೆ ಇದರಿಂದ ಹಾನಿಯಾಗಿದೆ. ವಿದ್ಯುತ್ ಸಂಪರ್ಕ ಕಡಿತವಾಗಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮರವೊಂದು ಉರುಳಿ ಬಿದ್ದಿದೆ. ಎನ್‍ಡಿಆರ್‍ಎಫ್ ಸಿಬ್ಬಂದಿಗಳು ಮರ ತೆರವುಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ದಕ್ಷಿಣಕನ್ನಡ (Dakshina Kannada) ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದ್ದು ಶಾಂಭವಿ ನದಿ ತುಂಬಿ ಹರಿಯುತ್ತಿದೆ. ಇದರಿಂದಾಗಿ ಮುಲ್ಕಿ ತಾಲೂಕಿನ ಅತಿಕಾರಿಬೆಟ್ಟು ಗ್ರಾಮದ ಮಟ್ಟು ಪ್ರದೇಶದಲ್ಲಿ ನೂರಕ್ಕೂ ಹೆಚ್ಚು ಮನೆಗಳ ಸುತ್ತ ನೀರು ನಿಂತಿದೆ. ಮಳೆ ಮುಂದುವರೆದರೆ ಜನರನ್ನೂ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇತಿಹಾಸ ಪ್ರಸಿದ್ದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ನೀರು ನುಗ್ಗಿದೆ. ದೇವಸ್ಥಾನದ ಬಳಿಯ ಶಾಂಭವಿ ನದಿಯ ನೀರು ಗರ್ಭಗುಡಿಯ ಮೆಟ್ಟಿಲಿನವರೆಗೂ ಬಂದಿದೆ. ಜಲದುರ್ಗಿ ಎಂದು ಹೆಸರು ಪಡೆದಿರುವ ದೇವಿ ಅಕ್ಷರಶಃ ಜಲದುರ್ಗಿಯಾಗಿ ಕಾಣುತ್ತಿದ್ದಾಳೆ. ಇದನ್ನೂ ಓದಿ: ಭಾರೀ ಮಳೆಗೆ ತುಂಗಾ ಜಲಾಶಯ ಭರ್ತಿ
Web Stories