ಹಾಸನ: ಸೋಲಿಸು ಎಂದು ರಾಜ್ಯ ಸರಕಾರ ನೌಕರರ ಸಂಘದ ರಾಜ್ಯಾಧ್ಯಕ್ಷ ಬಾಗೂರು ಮಂಜೇಗೌಡ ಹಾಗೂ ಅವರ ಬೆಂಬಲಿಗನ ಸಿಎಂ ಸಿದ್ದರಾಮಯ್ಯ ದೂರವಾಣಿಯನ್ನು ಮಾತನಾಡಿರುವ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಅಂಥ ಸಣ್ಣತನಕ್ಕೆ ನಾನು ಇಳಿಯಲ್ಲ. ಕಾಲ ಬಂದಾಗ ಎಲ್ಲದಕ್ಕೂ ಉತ್ತರ ನೀಡುವೆ ಎಂದು ತಿರುಗೇಟು ನೀಡಿದ್ದಾರೆ.
ಜಿಲ್ಲೆ ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ಸಿಎಂ ಹೇಳಿಕೆ ಬಗ್ಗೆ ಈಗ ಮಾತನಾಡುವುದಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ. ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ದೇವರು ಮತ್ತು ಜನರನ್ನು ಹೊರತುಪಡಿಸಿ ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದರು.
Advertisement
ಹಾಸನ ಜಿಲ್ಲೆಗೆ ಸುಮಾರು 40 ಕೋಟಿಯಷ್ಟು ಕುಡಿಯುವ ನೀರಿನ ಅನುದಾನ ಬಾಕಿ ಉಳಿಸಿಕೊಂಡಿದ್ದಾರೆ. ಕಾಚೇನಹಳ್ಳಿ ಏತನೀರಾವರಿ ಯೋಜನೆ ನಾನು ಮಾಡಿದ್ದು. ಅದನ್ನು ಉದ್ಘಾಟಿಸಿ ಹೋದ ಸಿಎಂ ಮುಂದೆ ಏನೂ ಮಾಡಿಲ್ಲ. ಅಂಥವರು ಹಾಸನ ಜಿಲ್ಲೆ ಹಾಗೂ ನನ್ನ ಕ್ಷೇತ್ರಕ್ಕೆ ಏನು ಅನುದಾನ ಕೊಟ್ಟಿದ್ದಾರೆ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.
Advertisement
ಅಂತಿಮವಾಗಿ ನನ್ನ ಜಿಲ್ಲೆಯ ಜನರು ನನಗೆ ಮುಖ್ಯ, ನಮ್ಮನ್ನು ಉಳಿಸಿಕೊಡಿ ಎಂದು ಜನರನ್ನೇ ಕೇಳುತ್ತೇನೆ. ನಮ್ಮ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಭಿಕ್ಷೆ ಬೇಡುವ ಸ್ಥಿತಿ ಬಂದಿದೆ. ಮೊದಲು ಈ ಸಮಸ್ಯೆ ಬಗೆಹರಿಸಿ ಆಮೇಲೆ ಮಾತನಾಡಲಿ ಎಂದು ಕುಟುಕಿದರು. ಸಿದ್ದರಾಮಯ್ಯ, ಬಾಗೂರು ಮಂಜೇಗೌಡ ಮತ್ತು ಕಲ್ಲೇನಹಳ್ಳಿ ಸೋಮಣ್ಣ ಎಂಬವರು 1.41 ನಿಮಿಷದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.