ಬೆಂಗಳೂರು/ಹಾಸನ: ಯಡಿಯೂರಪ್ಪ ರಕ್ತ ಕೊಟ್ರೂ ನಾಳೆ ಬೆಳಗ್ಗೆ ನೀರು ಬರಲ್ಲ ಅಂತಾ ಮಹದಾಯಿ ವಿಚಾರದಲ್ಲಿ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹದಾಯಿ ನೀರು ಯಡಿಯೂರಪ್ಪ ಮತ್ತು ಪರಿಕ್ಕರ್ ಆಸ್ತಿನಾ? ನಾನು ಸಿದ್ದರಾಮಯ್ಯ ಅವರನ್ನು ನಂಬೋದಿಲ್ಲ ಅಂತ ಪರಿಕ್ಕರ್ ಹೇಳ್ತಾರೆ. ಯಡಿಯೂರಪ್ಪ ಅವರನ್ನು ನಂಬ್ತಾರಂತೆ. ಏನು ಪರಿಕ್ಕರ್ ಮತ್ತು ಅಮಿತ್ ಷಾ ಆಟವಾಡ್ತಾರಾ? ಬಿಜೆಪಿ ನಾಯಕರು ಕರ್ನಾಟಕ ರಾಜ್ಯಕ್ಕೆ ದ್ರೋಹ ಮಾಡ್ತಾ ಇದ್ದಾರೆ. ಬಿಎಸ್‍ವೈ ರಕ್ತ ಕೊಟ್ಟರೂ ನಾಳೆ ಬೆಳಗ್ಗೆ ನೀರು ಬರುವುದಿಲ್ಲ. ನ್ಯಾಯಾಧಿಕರಣದಿಂದಲೇ ಆದೇಶ ಆಗಬೇಕು ಅಂತ ಎಚ್‍ಡಿಕೆ ಹೇಳಿದ್ರು.
Advertisement
Advertisement
ಮಹದಾಯಿ ನೀರು ಯಡಿಯೂರಪ್ಪ, ಗೋವಾ ಸಿಎಂ ಪರಿಕ್ಕರ್ ಆಸ್ತಿಯಲ್ಲ. ನೀರು ಜನರ ಆಸ್ತಿ. ಎರಡೂ ರಾಜ್ಯಗಳಿಗೆ ಸೇರಿದ ಹಕ್ಕು. ಜನರಿಗೆ ಟೋಪಿ ಹಾಕ್ಬೇಡಿ. ಪರಿಕ್ಕರ್ ಸಿದ್ದರಾಮಯ್ಯ ಮೇಲೆ ನಂಬಿಕೆ ಇಲ್ಲ ಅಂತಾ ಹೇಳ್ತಾರೆ. ಸಿದ್ದರಾಮಯ್ಯ 6 ಕೋಟಿ ಕನ್ನಡಿಗರ ಸಿಎಂ ಅಂತಾ ತಿರುಗೇಟು ನೀಡಿದ್ರು.
Advertisement
ಕೇಂದ್ರದ ಬಿಜೆಪಿಗರು ಕರ್ನಾಟಕದ ಜನರ ದಾರಿ ತಪ್ಪಿಸಿ, ಮತ ಪಡೆಯಲು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಜನವರಿ 5 ರಿಂದ ಬೆಳಗಾವಿಯಲ್ಲಿ ಕಾಗವಾಡದಿಂದ ಯಾತ್ರೆ ಶುರು ಮಾಡ್ತೀನಿ. ಬಿಜೆಪಿಯವರ ಕೀಳುಮಟ್ಟದ ರಾಜಕಾರಣವನ್ನು ಜನರ ಮುಂದೆ ಇಡ್ತೀನಿ. ಬಿಜೆಪಿಯವರು 17 ಮಂದಿ ಸಂಸದರು, ಸಚಿವರು ಕೈ ಕಟ್ಟಿಕೊಂಡು ನಿಲ್ತಾರೆ. ಅವರು ಮಾತಾಡಿದ್ದೇ ಇಲ್ಲ ಅಂದ್ರು.
Advertisement
ಇದೇ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಹಾಸನದಲ್ಲಿ ಮಾತನಾಡಿದ್ದು, ಗುಜರಾತ್ ಎಲೆಕ್ಷನ್ ಮುಗಿದ ಬಳಿಕ ಸಮಸ್ಯೆಗೆ ಒಂದು ಪರಿಹಾರ ಕಂಡು ಹಿಡಿಯಲೇ ಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಗೋವಾ, ಮಹಾರಾಷ್ಟ್ರ ಸಿಎಂಗಳ ಸಭೆ ನಡೆಸಿದರು. ಆ ಸಭೆಯಲ್ಲಿ ನಮ್ಮ ರಾಜ್ಯದ ಯಡಿಯೂರಪ್ಪ ಅವರೂ ಭಾಗಿಯಾಗಿದ್ದರು. ಸಭೆಯಲ್ಲಿ ಒಂದು ತೀರ್ಮಾನಕ್ಕೆ ಬರಲೇಬೇಕು ಎಂದು ಸೂಚನೆ ಕೊಟ್ಟರು. ಆದರೆ ದೆಹಲಿಯಿಂದ ಬಂದ ನಂತರ ಸರ್ಕಾರ ಉಳಿಸಿಕೊಳ್ಳಲು ಗೋವಾ ಸಿಎಂ ಏನು ಹೇಳಿಕೆ ನೀಡಿದರು ಎಂಬುದು ನಾಡಿನ ಜನರಿಗೆ ತಿಳಿದಿದೆ. ಕರ್ನಾಟಕಕ್ಕೆ ಎಷ್ಟು ಕುಡಿಯುವ ನೀರು ಕೊಡಬೇಕು ಎಂಬುದು ನ್ಯಾಯಾಧಿಕರಣದ ಮುಂದೆಯೇ ತೀರ್ಮಾನವಾಗಬೇಕು ಎಂದು ಗೋವಾ ಸಿಎಂ ಹೇಳಿದ್ದಾರೆ. ಆದರೆ ನೀರು ಹಂಚಿಕೆ ನಿಗದಿ ಮಾಡಿದ ನಂತರವೂ ಚರ್ಚೆಗೆ ಗ್ರಾಸವಾಗಲಿದೆ. ಹೀಗಾಗಿ ಇದು ಬಗೆಹರಿಯದ ಸಮಸ್ಯೆ ಎಂದರು.
ಇದೇ ವೇಳೆ ತಮ್ಮ ವಿರುದ್ಧ ಟೀಕೆ ಮಾಡಿರುವ ಬಂಡಾಯ ಶಾಸಕ ಚಲುವರಾಯಸ್ವಾಮಿ ಬಗ್ಗೆ ಮಾತನಾಡಲು ನಿರಾಕರಿಸಿದ ಗೌಡರು, ಅವರ ಹೆಸರು ಎತ್ತಬೇಡಿ ಎಂದು ಖಾರವಾಗಿ ಉತ್ತರಿಸಿದರು. ಜೆಡಿಎಸ್ ಟಿಕೆಟ್ ಹಂಚಿಕೆ ಸಂಬಂಧ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಎಲ್ಲಾ ಜಿಲ್ಲೆಗಳ ಆಕಾಂಕ್ಷಿಗಳ ಸಭೆ ನಡೆಸುತ್ತಿದ್ದಾರೆ. ಪ್ರಜ್ವಲ್ ರೇವಣ್ಣ, ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡುವ ಬಗ್ಗೆ ಮತ್ತೆ ಮತ್ತೆ ಚರ್ಚೆ ಬೇಡ ಎಂದರು.
ಚುನಾವಣೆ ಹೊಸ್ತಿಲಲ್ಲೇ ಉತ್ತರ ಕರ್ನಾಟಕದಲ್ಲಿ ಮಹದಾಯಿ ಹೋರಾಟ ತೀವ್ರಗೊಂಡಿದೆ. ಸಂಧಾನ ಹೆಸರಲ್ಲಿ ಬಿಜೆಪಿ ನಾಯಕರು ಉತ್ತರ ಕರ್ನಾಟಕ ಜನರ ಮೂಗಿಗೆ ತುಪ್ಪ ಸುರಿಯುವ ಕೆಲ್ಸ ಮಾಡ್ತಿದ್ದಾರೆ. ಈ ವಿಚಾರದಲ್ಲಿ ಪ್ರಧಾನಿಯವರೇ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿ ರೈತ ಮತ್ತು ಕನ್ನಡಪರ ಸಂಘಟನೆಗಳು ಇದೇ ತಿಂಗಳ 27ರಂದು ಬಂದ್‍ಗೆ ಕರೆ ನೀಡಿವೆ.
https://youtu.be/nK8HD8MjR_0