– ಯಾರ ಬ್ಲ್ಯಾಕ್‌ಮೇಲ್‌ಗೂ ಹೆದರಲ್ಲ; ವಾರ್ನಿಂಗ್
ಬೆಂಗಳೂರು: ದಾವಣಗೆರೆ ದಕ್ಷಿಣ, ಬಾಗಲಕೋಟೆಯ ಉಪಚುನಾವಣಾ ಕಣಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಬಹುತೇಕ ಅಂತಿಮಗೊಂಡಿದ್ದು, ದಾವಣಗೆರೆಯಲ್ಲಿ ಶಾಮನೂರು ಕುಟುಂಬಕ್ಕೆ (Shamanur Family) ಟಿಕೆಟ್ ಫಿಕ್ಸ್ ಆದಂತೆ ಕಾಣುತ್ತಿದೆ.
ಹೌದು. ದಾವಣಗೆರೆ (Davanagere) ಟಿಕೆಟ್ ಸಂಬಂಧ ಸಿಎಂ, ಡಿಸಿಎಂ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮತ್ತೊಂದು ಸಭೆ ನಡೆಸಿದ್ದು, ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್, ಸಚಿವ ಜಮೀರ್ ಅಹಮದ್ ಭಾಗಿಯಾಗಿದ್ದರು. ಸುದೀರ್ಘ ಮಾತುಕತೆಯ ಬಳಿಕ ಮುಸ್ಲಿಂ ಮುಖಂಡರ ನಡುವಿನ ಮಾತುಕತೆ ಯಶಸ್ವಿಯಾಗಿದ್ದು, ಎಸ್‌ಎಸ್ ಮಲ್ಲಿಕಾರ್ಜುನ ಪುತ್ರ ಸಮರ್ಥ್‌ಗೆ (Samarth Shamanur) ಟಿಕೆಟ್ ಖಚಿವಾಗಿದೆ ಅನ್ನೋದು ಆಪ್ತ ಮೂಲಗಳ ಮಾಹಿತಿ.

ಶಾಮನೂರು ಕುಟುಂಬಕ್ಕೆ ಟಿಕೆಟ್ ಖಚಿತವಾಗಿದ್ದು, ಭಾನುವಾರ (ಮಾ.22) ಅಧಿಕೃತವಾಗಿ ಘೋಷಣೆ ಆಗುವ ಸಾಧ್ಯತೆಯಿದೆ. ಅಲ್ಲದೇ ಬಾಗಲಕೋಟೆ ಕ್ಷೇತ್ರದಿಂದ ದಿ. ಮೇಟಿ ಪುತ್ರ ಉಮೇಶ್ ಮೇಟಿ ಅವರಿಗೆ ಅದೃಷ್ಟ ಒಲಿದಿದೆ. ಇದನ್ನೂ ಓದಿ: ಕುಣಿಗಲ್ ಸೊಸೈಟಿ ಚುನಾವಣೆಯಲ್ಲಿ ಅಕ್ರಮ – ಶಾಸಕ ರಂಗನಾಥ್ ಬಂಧನಕ್ಕೆ ಛಲವಾದಿ ಆಗ್ರಹ
ಪಟ್ಟು ಹಿಡಿದ ನಾಯಕರಿಗೆ ವಾರ್ನಿಂಗ್
ಟಿಕೆಟ್ ಕುರಿತು ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ, ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ದಾವಣಗೆರೆ ಕ್ಷೇತ್ರದಿಂದ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿದಿದ್ದರು. ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಗೆಲ್ಲಿಸಿಕೊಂಡು ಬಂದಿದೆ. ಈಗಲಾದರೂ ಸಮಾಜದ ಒಬ್ಬರಿಗೆ ಅವಕಾಶ ಕೊಡಬೇಕೆಂದು ಒತ್ತಾಯಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸುರ್ಜೇವಾಲಾ ಅವರು ಇಂತಹ ಬೆಳವಣಿಗೆಯನ್ನ ಪಕ್ಷ ಸಹಿಸಲ್ಲ, ಯಾರ ಬ್ಲ್ಯಾಕ್‌ಮೇಲ್‌ಗೆ ಪಕ್ಷ ಹೆದರಲ್ಲ ಎಂದು ಸ್ಪಷ್ಟಸಂದೇಶ ರವಾನಿಸಿದ್ರು ಎಂದು ಆಪ್ತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹೊಸ ಶಾಸಕರಿಗೂ ಸಂಪುಟದಲ್ಲಿ ಅವಕಾಶ ಬೇಕು, 55 ಶಾಸಕರು ಸಭೆ ಮಾಡಿ ಚರ್ಚೆ ಮಾಡಿದ್ದೇವೆ: ಇಕ್ಬಾಲ್ ಹುಸೇನ್

