ಬಳ್ಳಾರಿ: ಫೆ.28 ರಿಂದ ಮಾ.2ರವರೆಗೆ ಮೂರು ದಿನಗಳ ಕಾಲ ಅಪಾರ ಜನಸಾಗರದ ನಡುವೆ ಜರುಗಿದ ವಿಜಯನಗರದ (Vijayanagara) ಗತವೈಭವ ಸಾರುವ ಐತಿಹಾಸಿಕ ಹಂಪಿ ಉತ್ಸವಕ್ಕೆ ಭಾನುವಾರ ವಿದ್ಯುಕ್ತ ತೆರೆ ಬಿದ್ದಿದೆ. ಹಂಪಿ ಉತ್ಸವವನ್ನು ಜನೋತ್ಸವವಾಗಿಸುವಲ್ಲಿ ವಿಜಯನಗರ ಜಿಲ್ಲಾಡಳಿತ ಸಾಫಲ್ಯ ಕಂಡಿದೆ. ಬಿರುಬಿಸಿಲು ಲೆಕ್ಕಿಸದೇ ಲಕ್ಷಾಂತರ ಸಂಖ್ಯೆಯ ಜನ ಉತ್ಸವಕ್ಕೆ ಹರಿದು ಬಂದಿದ್ದರು.
ವಿಜಯನಗರ ಶಾಸಕ ಹೆಚ್.ಆರ್.ಗವಿಯಪ್ಪ ನೇತೃತ್ವದಲ್ಲಿ ಜನವರಿ ಇಂದಲೇ ಉತ್ಸವದ ಸಿದ್ಧತೆಯನ್ನು ಜಿಲ್ಲಾಡಳಿತ ಆರಂಭಿಸಿತ್ತು. ಉತ್ಸವದ ಯಶಸ್ವಿ ಆಯೋಜನೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಪೋಲಿಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಸ್ವಾಗತ, ಶಿಷ್ಠಾಚಾರ, ಕಲಾವಿದರ ಆಯ್ಕೆ, ಸಾರಿಗೆ, ವಸತಿ, ಆಹಾರ, ಪ್ರಚಾರ, ಜಾಹೀರಾತು ಮತ್ತು ಮಾಧ್ಯಮ ಸಮನ್ವಯ, ಹಣಕಾಸು, ವೇದಿಕೆ, ಕುಡಿಯುವ ನೀರು, ಆರೋಗ್ಯ ಮತ್ತು ನೈರ್ಮಲೀಕರಣ, ವಸ್ತು, ಕೃಷಿ, ಫಲಪುಷ್ಪ ಪ್ರದರ್ಶನ, ಕಾನೂನು ಸುವ್ಯವಸ್ಥೆ, ಕ್ರೀಡೆ, ವಿಚಾರ ಸಂಕಿರಣ, ಕವಿಗೋಷ್ಠಿ, ಎತ್ತು, ಕುರಿ, ಶ್ವಾನ ಸ್ಪರ್ಧೆ, ತುಂಗಾರತಿ, ವಸಂತ ವೈಭವ, ಜಾನಪದ ವಾಹಿನಿ, ಹಂಪಿ ಬೈಸ್ಕೈ (ಆಗಸದಿಂದ ಹಂಪಿ) ಅಗ್ನಿಶಾಮಕ ವ್ಯವಸ್ಥೆ ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ಸಮಿತಿಗಳನ್ನು ರಚಿಸಲಾಗಿತ್ತು. ಮುಂಜಾಗೃತವಾಗಿ ಅಗತ್ಯ ಪೂರ್ವ ತಯಾರಿ, ಸಂಪನ್ಮೂಲ ಹಾಗೂ ಸಿಬ್ಬಂದಿ ಕ್ರೂಢೀಕರಣ ಮಾಡಿಕೊಂಡು ಉತ್ಸವದ ಆಯೋಜನೆಗೆ ಅಣಿಯಾಗಿತ್ತು. ಉತ್ಸವದ ಆಯೋಜನೆಯ ನಡುವೆಯೇ ಜಿಲ್ಲಾಡಳಿತಕ್ಕೆ ಮೈಲಾರ, ಕೊಟ್ಟೂರು, ಕುರುವತ್ತಿಯಂತಹ ಜಾತ್ರಾ ಮಹೋತ್ಸವ, ಗುಡೇಕೋಟೆ ಉತ್ಸವಗಳನ್ನು ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸುವ ಒತ್ತಡವಿತ್ತು. ತಿಂಗಳ ಕಾಲ ಅಧಿಕಾರಿಗಳು ಹಗಲಿರುಳು ದಣಿವರೆಯದೇ ದುಡಿದಿದ್ದಾರೆ.
Advertisement
Advertisement
ನೀರು ಹಾಯಿಸಿ ಧೂಳಿಗೆ ಮುಕ್ತಿ
ಪ್ರತಿ ಬಾರಿ ಉತ್ಸವದಲ್ಲಿಯೂ ಭಾರೀ ಸಂಖ್ಯೆಯಲ್ಲಿ ವಾಹನಗಳು ಜನರು ಓಡಾಟ ಮಾಡುವುದರಿಂದ ಧೂಳು ಎದ್ದು ಜನರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಈ ಬಾರಿ ಜಿಲ್ಲಾಡಳಿತದಿಂದ ಮುಂಚಿತವಾಗಿಯೇ ಈ ಸಮಸ್ಯೆಗೆ ಪರಿಹಾರ ಹುಡುಕಲಾಯಿತು. ಮಾತಂಗ ಪರ್ವತ ಬಯಲಿನಲ್ಲಿ ನೆಲಕ್ಕೆ ಹಾಸಿಗೆ ಹೊದಿಸಿ ನೀರು ಹಾಯಿಸಲಾಯಿತು. ಹೊಸಪೇಟೆ ನಗರದಿಂದ ಹಂಪಿಯವರೆಗೆ ಪ್ರತಿನಿತ್ಯವೂ 5 ಟ್ಯಾಂಕರ್ ಮೂಲಕ ಪ್ರತಿ ಗಂಟೆಗೊಮ್ಮೆ ನೀರು ಹಾಯಿಸಲಾಗುತ್ತಿತ್ತು. ಇದರಿಂದಾಗಿ ಧೂಳಿನಿಂದ ಮುಕ್ತಿ ದೊರಕಿತು.
Advertisement
ನೀರು ನೆರಳಿನ ವ್ಯವಸ್ಥೆ
ನವೆಂಬರ್‌ನ ಚಳಿಗಾಲದ ಬದಲಾಗಿ ಮಾರ್ಚ್ ತಿಂಗಳ ಬಿರುಬೇಸಿಗೆಯಲ್ಲಿ ಹಂಪಿ ಉತ್ಸವ ಆಯೋಜಿಸಿದ್ದರಿಂದ ಜಿಲ್ಲಾಡಳಿತ ನೀರು ನೆರಳಿನ ವ್ಯವಸ್ಥೆಗೆ ಹೆಚ್ಚಿನ ಮಹತ್ವ ನೀಡಿತ್ತು. ಸ್ವತಃ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿದ್ದರು. ರೂ.10 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಸರಬರಾಜಿಗಾಗಿ ಹೊಸದಾಗಿ ಪೈಪ್ ಲೈನ್ ನಿರ್ಮಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಖರೀದಿಸಿದ್ದ 250 ಕುಡಿಯುವ ನೀರಿನ ಕ್ಯಾನ್‌ಗಳನ್ನು 30 ಸ್ಥಳಗಳಲ್ಲಿ ಇರಿಸಿ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದರ ಜೊತೆಗೆ ಶಾಸಕ ಹೆಚ್.ಆರ್.ಗವಿಯಪ್ಪನವರು ಕೃಷ್ಣ ಮಂದಿರದ ಎದುರಿನ ಕೃಷ್ಣ ಬಜಾರಿನ ಬಳಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದರು.
Advertisement
ಉತ್ತಮ ಆರೋಗ್ಯ ಸೇವೆ, ಸಾರಿಗೆ ನಿಯಂತ್ರಣ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಂಪಿ ಉತ್ಸವದಲ್ಲಿ 9 ತಾತ್ಕಾಲಿಕ ಚಿಕಿತ್ಸಾ ಕೇಂದ್ರ, 3 ಸಂಚಾರಿ ಆರೋಗ್ಯ ಘಟಕ, 13 ಆಂಬ್ಯುಲೆನ್ಸ್, 42 ತಜ್ಞ ವೈದ್ಯರು, 78 ಶುಶ್ರೂಷಕಿಯರು ಸೇರಿ 300ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದಾರೆ. ತಾತ್ಕಾಲಿಕ ಆರೋಗ್ಯ ಕೇಂದ್ರಗಳಲ್ಲಿ 5000ಕ್ಕೂ ಅಧಿಕ ಜನರು ಚಿಕಿತ್ಸೆ ಪಡೆದಿದ್ದಾರೆ. ಉತ್ಸವದ ಮೂರು ದಿನ ಜನರು ಹಂಪಿಗೆ ಆಗಮಿಸಲು ಹೊಸಪೇಟೆಯಿಂದ 30 ಹಾಗೂ ಕಂಪ್ಲಿ ಪಟ್ಟಣದಿಂದ 10 ಸಾರಿಗೆ ಬಸ್‌ಗಳನ್ನು ನಿಯೋಜಿಸಲಾತ್ತು. ಬಸ್‌ಗಳು ಕಾರ್ಯಾಚರಣೆ ನಡೆಸಿ ಜನರನ್ನು ಉತ್ಸವಕ್ಕೆ ಕರೆ ತಂದವು. ಮೊದಲ ದಿನ ಜಿಲ್ಲೆಯ ಎಲ್ಲ ಗ್ರಾಮಗಳಿಂದ 198 ಉಚಿತ ಬಸ್ ಸಾರಿಗೆ ಕಲ್ಪಿಸಲಾಗಿತ್ತು. ಸಂಚಾರಿ ಪೊಲೀಸರು ಕಡ್ಡಿರಾಂಪುರ ಹಾಗೂ ಕಮಲಾಪುರ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಣ ಮಾಡಿದರು. ಪ್ರಧಾನ ವೇದಿಕೆ ಬಳಿ 100 ಎಕರೆ ಜಾಗದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.
ಸೂಕ್ತ ಪೊಲೀಸ್ ಬಂದೋಬಸ್ತ್
ಹಂಪಿ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆಗೆ ಕ್ರಮವಹಿಸಲಾಗಿತ್ತು. ಹೊಸಪೇಟೆ ಮತ್ತು ಹಂಪಿಯಲ್ಲಿ 500 ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಕಣ್ಗಾವಲು ಇರಿಸಲಾಗಿತ್ತು. ಕೊಪ್ಪಳ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ರಾಯಚೂರು ಸೇರಿದಂತೆ ಇತರೆ ಜಿಲ್ಲೆಗಳಿಂದ ಆಗಮಿಸಿದ 1250 ಕ್ಕೂ ಅಧಿಕ ಪೊಲೀಸ್ ಹಾಗೂ 500 ಗೃಹರಕ್ಷಕ ದಳ ಸಿಬ್ಬಂದಿ ಕಾರ್ಯನಿರ್ವಹಿಸಿದರು. 4 ಎ.ಎಸ್.ಸಿ, 4 ಕೆ.ಎಸ್.ಆರ್.ಪಿ, 5 ಡಿ.ಎ.ಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು. ಒರ್ವ ಎಸ್.ಪಿ, 4 ಎ.ಎಸ್.ಪಿ, 9 ಡಿ.ಎಸ್.ಪಿ, 36 ಸಿಪಿಐ, 79 ಪಿ.ಎಸ್.ಐ, 183 ಎ.ಎಸ್.ಐ ಸ್ಥಳದಲ್ಲೇ ಬೀಡು ಬಿಟ್ಟು ಬಂದೋಬಸ್ತ್ ಕಾರ್ಯ ನಿರ್ವಹಿಸಿದ್ದಾರೆ. ಪೊಲೀಸ್ ಇಲಾಖೆಯಿಂದ ತಾತ್ಕಾಲಿಕ ಪೊಲೀಸ್ ಠಾಣೆ ಹಾಗೂ ಸಾರ್ವಜನಿಕ ಮಾಹಿತಿ ಕೇಂದ್ರಗಳನ್ನು ತೆರೆದು, ಧ್ವನಿವರ್ಧಕದ ಮೂಲಕ ಅಗತ್ಯ ಜಾಗೃತಿ ಸೂಚನೆಗಳನ್ನು ಜನರಿಗೆ ನೀಡಲಾಗುತ್ತಿತ್ತು.
ಇನ್ನೂ ಉತ್ಸವದಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಪ್ರತಿ ವೇದಿಕೆ, ತಾತ್ಕಾಲಿಕ ಬಸ್ ನಿಲ್ದಾಣ, ವಸ್ತುಪ್ರದರ್ಶನ ಸ್ಥಳದಲ್ಲಿ ಸಂಚಾರಿ ಶೌಚಾಲಯಗಳನ್ನು ಇರಿಸಲಾಗಿತ್ತು. ಉತ್ಸವದಲ್ಲಿ ಸ್ವಚ್ಚತೆಗಾಗಿಯೇ 400ಕ್ಕೂ ಹೆಚ್ಚು ಪೌರಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಹೊಸಪೇಟೆ ನಗರ ಸಭೆ ಸೇರಿದಂತೆ ಕಮಲಾಪುರ, ಮರಿಯಮ್ಮನಹಳ್ಳಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೂಡ್ಲಿಗಿ ಸ್ಥಳೀಯ ಸಂಸ್ಥೆಗಳಿಂದ ಸ್ವಚ್ಚತಾ ಸೇನಾನಿಗಳು ನಿತ್ಯ ಸ್ವಚ್ಛತೆಗಾಗಿ ಶ್ರಮಿಸಿದರು. ಉತ್ಸವ ಮೂರು ದಿನಗಳ ಕಾಲ ಹಂಪಿ ಗ್ರಾಮ ಹಾಗೂ ವೇದಿಕೆ ಬಳಿ ಹೊಸಪೇಟೆ ನಗರಸಭೆ ವತಿಯಿಂದ ಸೊಳ್ಳೆ ನಿಯಂತ್ರಣಕ್ಕಾಗಿ ಫಾಗಿಂಗ್ ಮಾಡಲಾಗಿತ್ತು. ಒಟ್ಟಾರೆ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮನಃಪೂರ್ವಕವಾಗಿ ಉತ್ಸವದ ಯಶಸ್ವಿಗೆ ಕರ್ತವ್ಯ ನಿರ್ವಹಿಸಿದರು. 2025ರ ಹಂಪಿ ಉತ್ಸವ ಜನೋತ್ಸವವಾಗಿ ಯಶಸ್ವಿಯಾಗಿ ಸಂಪನ್ನಗೊಂಡಿದೆ.