ಹಾಸನ: ಗ್ರಾಹಕರ ಸೋಗಿನಲ್ಲಿ ಬಂದ ಖತಾರ್ನಾಕ್ ಕಳ್ಳಿಯರು ಜ್ಯುವೆಲ್ಲರಿ ಅಂಗಡಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನವನ್ನ ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ. ಮಾಲೀಕನ ಸಮಯ ಪ್ರಜ್ಞೆಯಿಂದಾಗಿ ಕೆಲವೇ ನಿಮಿಷಗಳಲ್ಲಿ ಖತರ್ನಾಕ್ ಕಳ್ಳಿಯರು ಸಿಕ್ಕಿಬಿದ್ದಿದ್ದಾರೆ.
ಬೇಲೂರು ಪಟ್ಟಣದ ಮುಖ್ಯರಸ್ತೆಯಲ್ಲಿರುವ ಪ್ರತಿಭಾ ಜ್ಯುವೆಲ್ಲರ್ಸ್ ಅಂಗಡಿಗೆ ಶುಕ್ರವಾರ ವಯಸ್ಸಾದ ನಾಲ್ವರು ಮಹಿಳೆಯರು ಬಂದಿದ್ದರು. ಜೊತೆಯಲ್ಲಿ ಒಂದು ಮಗು ಕೂಡ ಇತ್ತು. ಅಂಗಡಿಗೆ ಬಂದವರೇ ಬೆಳ್ಳಿ ಆಭರಣ ಖರೀದಿ ಮಾಡಬೇಕಿದೆ ತೋರಿಸಿ ಎಂದಿದ್ದಾರೆ. ಅಂಗಡಿಯಲ್ಲಿ ಮಾಲೀಕ ವೀರೇಂದ್ರ ಒಬ್ಬರೇ ಇದ್ದರು. ಕಳ್ಳಿಯರು ಬೆಳ್ಳಿ ಆಭರಣ ತೋರಿಸಿ ಎಂದು ಕೇಳಿದ್ದರಿಂದ ಮಾಲೀಕ ಬೆಳ್ಳಿ ಆಭರಣ ಕೊಡಲು ಹೋದಾಗ ಚಾಲಾಕಿ ಮಹಿಳೆಯೊಬ್ಬಳು ಡ್ರಾನಲ್ಲಿದ್ದ ಚಿನ್ನದ ಗುಂಡುಗಳ ಬಾಕ್ಸ್ ಎಗರಿಸುತ್ತಾಳೆ. ಬಳಿಕ ಅದನ್ನು ಇನ್ನೊಬ್ಬ ವೃದ್ಧೆ ಕೈಯಲ್ಲಿ ಕೊಡುತ್ತಾಳೆ. ನಂತರ ಅದನ್ನು ವೃದ್ಧೆ ಬಚ್ಚಿಟ್ಟುಕೊಳ್ಳುತ್ತಾಳೆ. ಕಳ್ಳಿಯರು ಬಂದ ಕೆಲಸ ಮುಗಿದ ಕೂಡಲೇ ಕೆಲವೇ ನಿಮಿಷಗಳಲ್ಲಿ ಅಂಗಡಿಯಿಂದ ಹೊರಡುತ್ತಾರೆ. ಈ ಎಲ್ಲಾ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಹಿಳೆಯರ ಬಗ್ಗೆ ಅನುಮಾನಗೊಂಡ ಮಾಲೀಕ ಕೂಡಲೇ ಡ್ರಾ ಚೆಕ್ ಮಾಡಿದಾಗ ಚಿನ್ನದ ಗುಂಡಿದ್ದ 1 ಬಾಕ್ಸ್ ಇಲ್ಲವಾಗಿರುವುದು ಗೊತ್ತಾಗಿದೆ. ತಕ್ಷಣವೇ ನಾಲ್ವರ ಪೈಕಿ ಇಬ್ಬರನ್ನು ಹಿಡಿದು ಕೇಳಿದಾಗ ಅವರು ನಮಗೆ ಗೊತ್ತಿಲ್ಲ ಎಂದು ನಾಟಕ ಆಡಲು ಶುರು ಮಾಡಿದ್ದಾರೆ. ನಂತರ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳೀಯ ಪೊಲೀಸರು ಅಂಗಡಿಗೆ ಬಂದು ಕಳ್ಳಿಯರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.
ಇಷ್ಟಾದರೂ ಕಳ್ಳಿಯರು ತಪ್ಪು ಒಪ್ಪಿಕೊಂಡಿರಲಿಲ್ಲ. ನಂತರ ಅಂಗಡಿಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಚಾಲಾಕಿ ತಂಡದ ನಿಜಬಣ್ಣ ಬಯಲಾಗಿದೆ. ಮಾಡಿದ ತಪ್ಪಿಗೆ ಎಲ್ಲರೂ ಈಗ ಅಂದರ್ ಆಗಿದ್ದಾರೆ. ಇವರೆಲ್ಲರೂ ಮೈಸೂರು ಮೂಲದವರು ಎನ್ನಲಾಗಿದ್ದು, ತಮ್ಮದೇ ತಂಡ ಕಟ್ಟಿಕೊಂಡು ಕಳ್ಳತನದಲ್ಲಿ ನಿರತರಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.