ಲಕ್ನೋ: ಗ್ರೇಟರ್ ನೋಯ್ಡಾದಲ್ಲಿ (Greater Noida) ಒಂದೇ ಕುಟುಂಬದ ಐವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಸಾಯುವ ಮುನ್ನ ವ್ಯಕ್ತಿ ತನ್ನ ಮೊಬೈಲ್ನಲ್ಲಿ ಸಾವಿಗೆ ಕಾರಣರಾದವರ ಕುರಿತು ರೆಕಾರ್ಡ್ ಮಾಡಿ ಪ್ರಾಣ ಬಿಟ್ಟಿದ್ದಾರೆ.
ಗ್ರೇಟರ್ ನೋಯ್ಡಾದಲ್ಲಿ ಮೂರು ಮಕ್ಕಳು ಸೇರಿ ಕುಟುಂಬ ಐವರು ಸಾವನ್ನಪ್ಪಿದ ಪ್ರಕರಣದಲ್ಲಿ ಅಚ್ಚರಿಯ ತಿರುವು ಸಿಕ್ಕಿದೆ. ಮೃತ ವ್ಯಕ್ತಿಯ ಇಬ್ಬರು ಸಹೋದರಿಯರು ಮತ್ತು ಸೋದರ ಮಾವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆಗಾಗಿ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಶನಿವಾರ ಬೆಳಿಗ್ಗೆ ರಬುಪುರದ ನಾಗ್ಲಾ ಶ್ರೀ ಪದಂ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಶವವಾಗಿ ಪತ್ತೆಯಾದ 37 ವರ್ಷದ ಮಹೇಶ್, ಸಾವಿಗೆ ಮುನ್ನ ತಮ್ಮ ಮೊಬೈಲ್ ಫೋನ್ನಲ್ಲಿ ವಾಯ್ಸ್ ರೆಕಾರ್ಡ್ ಮಾಡಿಟ್ಟಿದ್ದರು. ನಮ್ಮೆಲ್ಲರ ಸಾವಿಗೆ ತನ್ನ ಇಬ್ಬರು ಸಹೋದರಿಯರು ಮತ್ತು ಸೋದರ ಮಾವ ಕಾರಣ ಎಂದು ರೆಕಾರ್ಡಿಂಗ್ನಲ್ಲಿ ಹೇಳಿದ್ದಾರೆ.
ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ಸಹೋದರಿಯರೊಂದಿಗೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಘಟನೆ ನಡೆಯುವ ಹಿಂದಿನ ರಾತ್ರಿ ಕುಟುಂಬವು ನೂಡಲ್ಸ್ ತಿಂದಿದ್ದರಿಂದಲೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಕಳೆಗಟ್ಟಿದ ದಸರಾ ಸಂಭ್ರಮ – ಆನೆಗಳಿಗೆ ಜಂಬೂ ಸವಾರಿ ತಾಲೀಮು
ಮರಣೋತ್ತರ ಪರೀಕ್ಷೆಯಲ್ಲಿ ವಿಷಪ್ರಾಶನದ ಲಕ್ಷಣಗಳು ಕಂಡುಬಂದಿವೆ. ಮೃತರ ಅಂಗಾಂಗಗಳನ್ನು ಸಂರಕ್ಷಿಸಿ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರವೇ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ.
ಮೃತ ಮಹೇಶ್ನ ಬಾವ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಇದನ್ನೂ ಓದಿ: ಊಟ ಮಾಡಿ ಮಲಗಿದ್ದ 3 ವರ್ಷದ ಮಗು ಅನುಮಾನಾಸ್ಪದ ಸಾವು
