ಬೆಂಗಳೂರು: 2020ನೇ ವರ್ಷದಲ್ಲೂ ಹಲವು ಚುನಾವಣೆಗಳು ನಡೆಯಲಿವೆ. ಈ ಪೈಕಿ ಇದೇ ಜುಲೈನಲ್ಲಿ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ವಿಧಾನ ಪರಿಷತ್ ಸದಸ್ಯರಾದ ಈಶಾನ್ಯ ಶಿಕ್ಷಕರ ಕ್ಷೇತ್ರದ ಸದಸ್ಯ ಶರಣಪ್ಪ ಮಟ್ಟೂರು, ಬೆಂಗಳೂರು ಶಿಕ್ಷಕರ ಕ್ಷೇತ್ರದ ಸದಸ್ಯ ಪುಟ್ಟಣ್ಣ, ಪಶ್ಚಿಮ ಪದವೀಧರ ಕ್ಷೇತ್ರದ ಸದಸ್ಯ ಎಸ್.ವಿ ಸಂಕನೂರ ಮತ್ತು ಆಗ್ನೇಯ ಪದವೀಧರ ಕ್ಷೇತ್ರದ ಸದಸ್ಯ ಆರ್. ಚೌಡರೆಡ್ಡಿ ತೂಪಲ್ಲಿಯವರು ಮುಂದಿನ ಜೂನ್ 30ರಂದು ನಿವೃತ್ತಿ ಆಗಲಿದ್ದಾರೆ. ಇವರಿಂದ ತೆರವಾಗುವ ಸ್ಥಾನಗಳಿಗೆ ಇನ್ನೆರಡು ತಿಂಗಳಲ್ಲಿ ಚುನಾವಣಾ ದಿನಾಂಕ ಘೋಷಣೆ ಆಗಲಿದ್ದು, ರಾಜ್ಯ ಚುನಾವಣಾ ಆಯೋಗ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.
Advertisement
Advertisement
ರಾಜ್ಯ ಚುನಾವಣಾ ಆಯೋಗಕ್ಕೆ ಚುನಾವಣೆ ನಡೆಸಲೇನೂ ತೊಡಕಿಲ್ಲದಿದ್ದರೂ, ಆತಂಕವೊಂದು ಕಾಡುತ್ತಿದೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಗಳಿಗೆ ಪ್ರತೀ ಬಾರಿಯೂ ಎಷ್ಟೇ ಪ್ರಚಾರ ಮಾಡಿದರು ಅರ್ಹ ಮತದಾರರ ನೋಂದಣಿಯಲ್ಲಿ ಏರಿಕೆ ಕಂಡುಬರುತ್ತಿಲ್ಲ ಅನ್ನೋದೇ ಆಯೋಗದ ಕಳವಳವಾಗಿದೆ. ಹೀಗಾಗಿ ಇದೀಗ ಈ ನಾಲ್ಕು ಪರಿಷತ್ ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಆರು ತಿಂಗಳು ಮುಂಚಿತವಾಗಿಯೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಿಕೊಳ್ಳುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡಿದೆ.
Advertisement
ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಇಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಈ ಕುರಿತು ಸುದ್ದಿಗೋಷ್ಟಿ ನಡೆಸಿದರು. ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ಪದವೀಧರ ಕ್ಷೇತ್ರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನೊಳಗೊಂಡ ಆಗ್ನೇಯ ಪದವೀಧರ ಕ್ಷೇತ್ರ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡ ಈಶಾನ್ಯ ಶಿಕ್ಷಕರ ಕ್ಷೇತ್ರ ಹಾಗೂ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳನ್ನು ಒಳಗೊಂಡ ಬೆಂಗಳೂರು ಶಿಕ್ಷಕರ ಕ್ಷೇತ್ರದ ಅವದಿ ಜೂನ್ 30ಕ್ಕೆ ಮುಕ್ತಾಯವಾಗಲಿದೆ.
Advertisement
ಈ ಕ್ಷೇತ್ರಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಸದ್ಯದಲ್ಲೇ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಿದೆ ಎಂದು ಸಂಜಿವ್ ಕುಮಾರ್ ಹೇಳಿದರು. 2014ರ ಮತದಾರರ ಪಟ್ಟಿಗೆ ಹೋಲಿಸಿದಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಮಾತ್ರ ಹೆಚ್ಚು ಮತದಾರರು ಹೆಸರು ನೋಂದಾಯಿಸಿಕೊಂಡಿದ್ದು, ಉಳಿದ ಮೂರು ಕ್ಷೇತ್ರದಲ್ಲಿ ಮತದಾರರ ನೋಂದಣಿ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. ಇದು ಅಸಂತೋಷದ ಬೆಳವಣಿಗೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಇನ್ನೂ ಕೂಡ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಜೂನ್ ವರೆಗೂ ಸಮಯವಿದೆ ಎಂದು ಕಾಯದೆ ಈಗಲೇ ಅರ್ಜಿ ಸಲ್ಲಿಸಿ, ಏಳು ದಿನ ಅರ್ಜಿ ಪರಿಶೀಲನೆಗೆ ಸಮಯ ಬೇಕಾಗಲಿದೆ. ಹಾಗಾಗಿ ಕಡೆಯ ದಿನಕ್ಕೆ ಕಾಯದೆ ಈಗಲೇ ಅರ್ಜಿ ಸಲ್ಲಿಸಿ ಎಂದು ಮತದಾರರಲ್ಲಿ ಸಂಜೀವ್ ಕುಮಾರ್ ಮನವಿ ಮಾಡಿದರು.
ಪದವೀಧರರ ಕ್ಷೇತ್ರದ ಚುನಾವಣಾ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಯಾವುದೇ ಪದವಿಯ ಫಲಿತಾಂಶ ಪ್ರಕಟಗೊಂಡು ಮೂರು ವರ್ಷ ಆಗಿರುವ ಪ್ರೌಢಶಾಲೆ ಅಥವಾ ಸಮಾನಾರ್ಥಕ ಶಿಕ್ಷಣದಲ್ಲಿ ಕಳೆದ ಆರು ವರ್ಷದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ್ದವರು ಮತದಾರರಾಗಲು ಅರ್ಹರಾಗಿದ್ದಾರೆ. ಈ ಅರ್ಹತೆ ಇರುವವರು ಪದವಿ ಪ್ರಮಾಣ ಪತ್ರ, ಶಿಕ್ಷಕರ ಪ್ರಮಾಣ ಪತ್ರ ಹಾಗೂ ನಿವಾಸಿ ದೃಢೀಕರಣ ಪತ್ರ ನೀಡಿ ಹೆಸರು ನೋಂದಣಿಗೆ ಅರ್ಜಿ ಸಲ್ಲಿಸುವಂತೆ ಸಂಜೀವ್ ಕುಮಾರ್ ತಿಳಿಸಿದರು.
2020ರ ಜನವರಿ 16ರವರೆಗೆ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 68,049 ಮತದಾರರು, ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ 1,02,287 ಮತದಾರರು, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 24,941 ಮತದಾರರು ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 17,610 ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಇದೇ ವೇಳೆ ಸಂಜೀವ್ ಕುಮಾರ್ ಮಾಹಿತಿ ಕೊಟ್ಟರು.