ಶಿವಮೊಗ್ಗ: ಪಾಕಿಸ್ತಾನ ಪರ ಮುಸ್ಲಿಂ ಗೂಂಡಾಗಳಿಗೆ ರಾಜ್ಯ ಸರ್ಕಾರ ಹೆದರಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಬೆಟ್ಟದಹಳ್ಳಿ ಕಸಾಯಿಖಾನೆ ವಿರುದ್ಧ ದೂರು ನೀಡಿದ ಒಬ್ಬ ಮಹಿಳೆ ಮೇಲೆ ನೂರಕ್ಕೂ ಹೆಚ್ಚು ಜನ ದಾಳಿ ಮಾಡಿ, ಪಾಕ್ ಪರ ಘೋಷಣೆ ಕೂಗಿದ್ದಾರೆ. ಇದೇ ರೀತಿ ಯಲಹಂಕದಲ್ಲಿ ಇದ್ದ ಅಕ್ರಮ ಕಸಾಯಿಖಾನೆಗೆ ನೋಟಿಸ್ ನೀಡಲು ಹೋದ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದೆ. ಇವರ ಮೇಲೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ಅವರ ಮೇಲೆ ಗೂಂಡಾಗಳು ಹಿಡಿತ ಇಟ್ಟುಕೊಂಡಿದ್ದಾರೆ ಎಂಬ ಅನುಮಾನ ಕಾಡುತ್ತಿದೆ ಎಂದು ಹೇಳಿದರು.
Advertisement
ರಾಜ್ಯದಲ್ಲಿ ಗೃಹಸಚಿವರು ಇದ್ದಾರಾ? ಎಂದು ಪ್ರಶ್ನಿಸಿದ ಅವರು, ನೀವು ಮುಸ್ಲಿಂ ಗೂಂಡಾಗಳಿಗೆ ಹೆದರಿದ್ದೀರಾ? ಎಂದರು. ಗೃಹಖಾತೆ ನಿರ್ವಹಣೆ ಮಾಡಲು ವಿಫಲರಾಗಿರುವ ರಾಮಲಿಂಗಾರೆಡ್ಡಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು. ಪಾಕ್ ಪರ ಮುಸಲ್ಮಾನ್ ಗೂಂಡಾಗಳ ಕೈಲಿ ಸರ್ಕಾರ ಇದೆ ಎಂಬ ಭಾವನೆ ಮೂಡಿದೆ. ಮುಖ್ಯಮಂತ್ರಿ ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನು ಬಿಟ್ಟು ಏನು ಕ್ರಮ ಕೈಗೊಂಡಿದ್ದೀರಿ ತಿಳಿಸಬೇಕು ಎಂದು ಪಟ್ಟು ಹಿಡಿದರು.
Advertisement
ಗೋವುಗಳ ಪರವಾಗಿ ಹೋದ ಒಬ್ಬಂಟಿ ಮಹಿಳೆ ಮೇಲೆ ಹಲ್ಲೆಯಾಗಿದೆ. ಈ ಬಗ್ಗೆ ವಿಚಾರವಾದಿಗಳು ಯಾಕೆ ಮೌನವಾಗಿದ್ದಾರೆ? ಗೌರಿ ಲಂಕೇಶ್, ಕಲಬುರ್ಗಿ, ನಂದಿನಿ ಪ್ರಕರಣ ಇವೆಲ್ಲವೂ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಲಕ್ಷಣ. ಈ ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಿ ಎಂದು ಆಗ್ರಹಿಸಿದರು.
Advertisement
ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಈ ಕಾಯ್ದೆ ಜಾರಿಗೆ ತರುವ ಮುನ್ನ ಯಾವ ಯಾವ ವಿಷಯ ಸೇರಿಸಬೇಕು ಎಂಬ ಬಗ್ಗೆ ಇನ್ನೊಮ್ಮೆ ಯೋಚಿಸಿ. ತಪ್ತ ಮುದ್ರೆಯನ್ನೂ ಈ ಕಾಯ್ದೆ ವ್ಯಾಪ್ತಿಗೆ ಸೇರಿಸುತ್ತಿದೆ. ಹಿಂದೂ ಸಮಾಜದ ಅಪಮಾನ ಮಾಡುವ ಉದ್ದೇಶದಿಂದ ಈ ಕಾಯ್ದೆ ತರಲಾಗುತ್ತಿದೆ. ಇದೇ ಕಾರಣದಿಂದ ಸರ್ಕಾರ ಬಿದ್ದುಹೋಗುವ ಅಪಾಯದಲ್ಲಿದೆ. ಈ ಬಗ್ಗೆ ಎಚ್ಚರಿಕೆಯಿಂದ ವರ್ತಿಸಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದರು.
Advertisement
ಇದನ್ನೂ ಓದಿ: ಗೋ ಹತ್ಯೆ ಬಗ್ಗೆ ದೂರು ನೀಡಿದ್ದ ಮಹಿಳಾ ಟೆಕ್ಕಿ ಮೇಲೆ ಮಾರಣಾಂತಿಕ ಹಲ್ಲೆ