ಬಳ್ಳಾರಿ: ರಾಜಕಾರಣಿಗಳಿಗೆ ಗನ್ ಮ್ಯಾನ್ ಗಳು ಭದ್ರತೆ ಕೊಡೋದನ್ನ ನೀವು ನೋಡಿರ್ತೀರಿ, ಕೇಳಿರ್ತೀರಿ. ಆದ್ರೆ ಮಾಜಿ ಸಚಿವ, ಹಾಲಿ ಶಾಸಕರಿಗೆ ಭದ್ರತೆ ನೀಡೋ ಗನ್ ಮ್ಯಾನ್ ಒಬ್ಬರಿಗೆ ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಭಾಗ್ಯ ದೊರೆತಿದೆ. ಭದ್ರೆತೆ ನೀಡಿದ್ದಕ್ಕಾಗಿ ಶಾಸಕರು ಮೂರು ಕಾಮಗಾರಿಗಳ ಕೆಲಸವನ್ನು ಗನ್ ಮ್ಯಾನ್ ಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮಾಜಿ ಸಚಿವ, ಹಡಗಲಿಯ ಹಾಲಿ ಶಾಸಕ ಪರಮೇಶ್ವರ ನಾಯ್ಕ್ ರ ಭ್ರಷ್ಟತನ ಈಗಾಗಲೇ ರಾಜ್ಯದ ಜನರಿಗೆ ತಿಳಿದಾಗಿದೆ. ಆದ್ರೆ ಇದೂವರೆಗೂ ಸರ್ಕಾರದಿಂದ ಬರೋ ಯೋಜನೆಗಳು, ಕಾಮಗಾರಿಗಳನ್ನು ಬೆಂಬಲಿಗರು, ಪರಮಾಪ್ತರಿಗೆ ಮಾತ್ರ ಹಂಚುತ್ತಿದ್ದ ಪರಮೇಶ್ವರ ನಾಯ್ಕ್, ಇದೀಗ ಮತ್ತೊಂದು ಅಕ್ರಮ ಎಸಗಿದ್ದಾರೆ.
Advertisement
Advertisement
ಹಡಗಲಿ ಪುರಸಭೆಯ 14ನೇ ಹಣಕಾಸು ಯೋಜನೆಯಲ್ಲಿನ ಮೂರು ಕಾಮಗಾರಿಗಳನ್ನು ತಮ್ಮ ಗನ್ ಮ್ಯಾನ್ ಎಕಾಂಬರ್ ನಾಯ್ಕ್ ಗೆ ಗುತ್ತಿಗೆ ನೀಡಿ ಮತ್ತೊಂದು ಅಕ್ರಮ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ. 14ನೇ ಹಣಕಾಸು ಯೋಜನೆಯಲ್ಲಿ 79.58 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ 16 ಕಾಮಗಾರಿಗಳ ಪೈಕಿ ತಲಾ 5 ಲಕ್ಷದ ಮೂರು ಕಾಮಗಾರಿಗಳನ್ನು ತಮ್ಮ ಗನ್ ಮ್ಯಾನ್ ಎಕಾಂಬರ್ ನಾಯ್ಕ್ ಗೆ ನೀಡಿರುವುದು ಪರಮೇಶ್ವರ ನಾಯ್ಕ್ ರ ಪರಮಭ್ರಷ್ಟತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
Advertisement
Advertisement
ಪುರಸಭೆಯಿಂದ 14ನೇ ಹಣಕಾಸಿನ ಯೋಜನೆಗಳ ಕಾಮಗಾರಿಯ ಟೆಂಡರ್ ಮುದ್ದಿ ಸುರೇಶ ಎನ್ನುವವರಿಗಾಗಿದೆ. ಆದ್ರೆ ಟೆಂಡರ್ ಯಾರಿಗಾದ್ರೂ ಏನು, ಕಾಮಗಾರಿಗಳ ಲಿಸ್ಟ್ ಹಾಗೂ ಕೆಲಸ ಮಾಡೋ ಗುತ್ತಿಗೆದಾರರ ಲಿಸ್ಟ್ ಮಾತ್ರ ಪರಮೇಶ್ವರ ನಾಯ್ಕ್ ಅವರೇ ಫೈನಲ್ ಮಾಡ್ತಾರೆ. ಹೀಗಾಗಿ ಹೂವಿನಹಡಗಲಿಯಲ್ಲಿ ನಡೆಯೋ ಕಾಮಗಾರಿಗಳ ಬಿಲ್ ಒಬ್ಬರ ಹೆಸರಿಗೆ ನೀಡಿದ್ರೆ, ಕೆಲಸ ಮಾಡೋದು ಮಾತ್ರ ಇನ್ಯಾರೋ ಎನ್ನುವಂತಾಗಿದೆ. ಅಲ್ಲದೇ 16 ಕಾಮಗಾರಿಗಳ ಲಿಸ್ಟ್ ಫೈನಲ್ ಮಾಡಿರುವ ಪರಮೇಶ್ವರ ನಾಯ್ಕ್ ಮೂರು ಕಾಮಗಾರಿಗಳನ್ನು ಕೇವಲ `ಈ’ ಅನ್ನೋ ಹೆಸರಿಗೆ ನೀಡಲು ಸೂಚಿಸಿರುವುದು ಪರಮೇಶ್ವರ ನಾಯ್ಕ್ ರ ಜಾಣತನವನ್ನು ಎತ್ತಿ ತೋರಿಸುತ್ತಿದೆ.
ಎಲ್ಲ ಕಾಮಗಾರಿಗಳನ್ನು ಹಂಚಿಕೆ ಮಾಡಿರುವ ಶಾಸಕ ಪರಮೇಶ್ವರ ನಾಯ್ಕ್, ಮೂರು ಕಾಮಗಾರಿಗಳನ್ನು ಗನ್ ಮ್ಯಾನ್ ಎಕಾಂಬರ್ ಗೆ ನೀಡಿದ್ದಾರೆ ಅಂತಾ ಪುರಸಭೆ ಸದಸ್ಯರು ಆರೋಪ ಮಾಡುತ್ತಿದ್ದಾರೆ. ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳನ್ನು ಪ್ರಶ್ನೆ ಮಾಡಿದ್ರೆ ಹಾಗೆಲ್ಲಾ ಏನೂ ಆಗಿಲ್ಲ. ಜಿಲ್ಲಾಧಿಕಾರಿಗಳ ಬಳಿ ಅಂತಿಮ ಪಟ್ಟಿ ಇದೆ ಅಂತಾ ಹಾರಿಕೆ ಉತ್ತರ ನೀಡುತ್ತಾರೆ.
14ನೇ ಹಣಕಾಸು ಯೋಜನೆಯು ಪ್ರಥಮ ದರ್ಜೆ ಗುತ್ತಿಗೆದಾರರ ಹೆಸರಿನಲ್ಲಿ ಟೆಂಡರ್ ಆದ್ರೂ ಕಾಮಗಾರಿಗಳನ್ನು ಮಾತ್ರ ಪರಮೇಶ್ವರ ನಾಯ್ಕ್ ಪರಮಾಪ್ತರೇ ಮಾಡೋದು ಅಂತಾ ಪುರಸಭೆ ಸದಸ್ಯರು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ದಕ್ಷ ಅಧಿಕಾರಿ ಎಂದು ಹೆಸರು ಗಳಿಸಿರುವ ಬಳ್ಳಾರಿ ಜಿಲ್ಲಾಧಿಕಾರಿಗಳು ಶಾಸಕರ ಗನ್ ಮ್ಯಾನ್ ಗೂ ಕಾಮಗಾರಿಗಳ ಗುತ್ತಿಗೆ ನೀಡಿರುವ ಪ್ರಕರಣ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.