ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ (Govt Primary School) ಮತ್ತು ಪ್ರೌಢಶಾಲೆಗಳಲ್ಲಿ(High School) ಖಾಲಿ ಇರುವ ಬೋಧಕ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 51 ಸಾವಿರ ಅತಿಥಿ ಶಿಕ್ಷಕರನ್ನು (Guest Teachers) ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
2026-27ನೇ ಶೈಕ್ಷಣಿಕ ಸಾಲು ಮೇ ತಿಂಗಳಿನಿಂದಲೇ ಆರಂಭವಾಗುತ್ತಿರುವುದರಿಂದ, ಶಾಲೆಗಳ ಆರಂಭದಲ್ಲೇ ಶಿಕ್ಷಕರ ಕೊರತೆಯಾಗದಂತೆ ತಡೆಯಲು ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಪ್ರಾಥಮಿಕ ಶಾಲೆಗಳಿಗೆ 40 ಸಾವಿರ, ಪ್ರೌಢಶಾಲೆಗಳು11 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮತಿ ಸಿಕ್ಕಿದೆ.
ಈ ನೇಮಕಾತಿಯು ಕೇವಲ ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಖಾಯಂ ಶಿಕ್ಷಕರು ನೇಮಕವಾಗುವವರೆಗೆ ಅಥವಾ ಪ್ರಸ್ತುತ ಶೈಕ್ಷಣಿಕ ವರ್ಷದ (2026-27) ಅಂತ್ಯದವರೆಗೆ ಮಾತ್ರ ಅನ್ವಯಿಸುತ್ತದೆ.
ಶೈಕ್ಷಣಿಕ ವರ್ಷದ ಆರಂಭದಲ್ಲೇ ಅತಿಥಿ ಶಿಕ್ಷಕರು ಲಭ್ಯವಾಗುವುದರಿಂದ ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ಮತ್ತು ಶಾಲಾ ಚಟುವಟಿಕೆಗಳ ಸುಗಮ ನಿರ್ವಹಣೆಗೆ ಅನುಕೂಲವಾಗಲಿದೆ.
ಅತಿಥಿ ಶಿಕ್ಷಕರ ಗೌರವಧನ ಪಾವತಿಗೆ ಅಗತ್ಯವಿರುವ ಅನುದಾನದ ವಿವರ ಹಾಗೂ ಜಿಲ್ಲಾ/ತಾಲ್ಲೂಕುವಾರು ಹಂಚಿಕೆಯ ಸಂಪೂರ್ಣ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ.

