ಹೊಯ್ಸಳಲು ಗ್ರಾಮಕ್ಕೆ 75 ವರ್ಷಗಳ ಬಳಿಕ ಬಂತು ಸರ್ಕಾರಿ ಬಸ್

Public TV
2 Min Read
Hoysalalu Government Bus Chikkamagaluru

ಚಿಕ್ಕಮಗಳೂರು: ರಾಜ್ಯವನ್ನಾಳಿದ ಹಲವು ರಾಜ ಮನೆತನಗಳಲ್ಲಿ ಹೊಯ್ಸಳ ಮನೆತನ (Hoysala Empire) ಕೂಡ ಒಂದು. ಅಂತಹ ಹೊಯ್ಸಳ ರಾಜರ ಮೂಲ ಸ್ಥಾನವಾದ ಹೊಯ್ಸಳಲು (Hoysalalu) ಗ್ರಾಮದಲ್ಲಿ ಸ್ವಾತಂತ್ರ‍್ಯ ಸಿಕ್ಕಿ 75 ವರ್ಷಗಳ ಬಳಿಕ ಮೊದಲ ಬಾರಿಗೆ ಸರ್ಕಾರಿ ಬಸ್ (Government Bus) ಓಡಿದೆ.

ದಶಕಗಳ ಮನವಿ ಹಾಗೂ ಹೋರಾಟದ ಬಳಿಕ ಅಂತೂ ಇಂತು ನಮ್ಮ ಊರಿಗೆ ಸರ್ಕಾರಿ ಬಸ್ ಬಂತೆಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ರಾಜವಂಶ ಹೊಯ್ಸಳರ ಮೂಲಸ್ಥಾನ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಯ್ಸಳಲು ಗ್ರಾಮ. ಈ ಗ್ರಾಮದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದ ದೇವಾಲಯ ಇಂದಿಗೂ ಇದೆ.

Hoysalalu Government Bus Chikkamagaluru 1

ಹೊಯ್ಸಳಲು ಗ್ರಾಮದಲ್ಲಿ ಸುಮಾರು 200ಕ್ಕೂ ಅಧಿಕ ಕುಟುಂಬಗಳಿವೆ. ಕಾಡಂಚಿನ ಈ ಕುಗ್ರಾಮ ಮೂಲಭೂತ ಸೌಕರ್ಯದಿಂದ ವಂಚಿತವಾಗಿತ್ತು. 75 ವರ್ಷಗಳಿಂದ ಅನೇಕ ಸರ್ಕಾರಗಳು ಬಂದು ಹೋದರು ಈ ಗ್ರಾಮದಲ್ಲಿ ಸರ್ಕಾರಿ ಬಸ್ ಓಡಿರಲಿಲ್ಲ. ಈ ಗ್ರಾಮದ ಇತರೆ ಸಮಸ್ಯೆಗಳಿಗೂ ಯಾವ ಸರ್ಕಾರಗಳು ಸ್ಪಂದಿಸಿರಲಿಲ್ಲ. ಬಡವರು-ಕೂಲಿ ಕಾರ್ಮಿಕರೇ ಹೆಚ್ಚಿರುವ ಮೂಲಭೂತ ಸೌಲಭ್ಯ ಹಾಗೂ ಸರ್ಕಾರಿ ಬಸ್ ಸೇವೆಗೆ ಹಲವು ದಶಕಗಳಿಂದ ಮನವಿ ಮಾಡುತ್ತಲೇ ಬಂದಿದ್ದರು. ಆದರೆ ಮಾಡುತ್ತೇವೆ ಅನ್ನೋ ಸರ್ಕಾರ ಹಾಗೂ ಜನನಾಯಕರು ಏನನ್ನೂ ಮಾಡಿರಲಿಲ್ಲ.

Hoysalalu Government Bus Chikkamagaluru 2

ಬಿಸಿಲು, ಮಳೆ, ಚಳಿ, ಗಾಳಿ ಎನ್ನದೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು 5 ಕಿ.ಮೀ ನಡೆದುಕೊಂಡು ಬಂದು ಬಸ್ ಹಿಡಿದು ಶಾಲೆ, ಕಚೇರಿಗಳಿಗೆ ಹೋಗಬೇಕಾಗಿತ್ತು. ಇಲ್ಲಿನ ನಿವಾಸಿಗಳು ಮೂಡಿಗೆರೆಗೆ ನೂತನವಾಗಿ ಆಯ್ಕೆಯಾದ ಶಾಸಕಿ ನಯನಾ ಮೋಟಮ್ಮನವರಿಗೂ ಬಸ್‌ಗಾಗಿ ಮನವಿ ಸಲ್ಲಿಸಿದ್ದರು. ಇದೀಗ ಹೊಯ್ಸಳಲು ಗ್ರಾಮಕ್ಕೆ ಸರ್ಕಾರಿ ಬಸ್ ಬಂದಿರುವುದು ಗ್ರಾಮಸ್ಥರ ದಶಕಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಇದನ್ನೂ ಓದಿ: ಮಳೆಗಾಗಿ ವಿಚಿತ್ರವಾದ ಆಚರಣೆ- ಸ್ಮಶಾನದ ಗೋರಿಗಳಿಗೆ ನೀರುಣಿಸಿದ ಗ್ರಾಮಸ್ಥರು

ಹೀಗಾಗಿ ಗ್ರಾಮಸ್ಥರು ಬಸ್ಸಿಗೆ ತಳಿರು ತೋರಣಗಳನ್ನು ಕಟ್ಟಿ ಸ್ವಾಗತಿಸಿಕೊಂಡಿದ್ದಾರೆ. ಬಸ್ಸಿನ ಬಾಗಿಲಿಗೆ ಟೇಪ್ ಹಾಕಿ, ಅದನ್ನು ಕತ್ತರಿಸುವ ಮೂಲಕ ಮತ್ತೆಂದು ನಿಲ್ಲದಿರಲಿ ಎಂದು ಸಂಚಾರಕ್ಕೆ ಅಡಿ ಇಟ್ಟಿದ್ದಾರೆ. ಹೊಯ್ಸಳಲು ಗ್ರಾಮಕ್ಕೆ ಸರ್ಕಾರಿ ಬಸ್ ಸೇವೆ ಸಿಕ್ಕಿರುವುದರಿಂದ ಶಕ್ತಿ ಯೋಜನೆಯು ಈ ಭಾಗದ ಬಡ ವರ್ಗದವರಿಗೆ ಅನುಕೂಲವಾಗಲಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ನೂರಾರು ಹಳ್ಳಿಗಳಿಗೆ ಇಂದಿಗೂ ಸರ್ಕಾರಿ ಬಸ್ ಸೌಲಭ್ಯವಿಲ್ಲ. ಹೀಗಾಗಿ ಸರ್ಕಾರ ಎಲ್ಲಾ ಭಾಗಕ್ಕೂ ಸರ್ಕಾರಿ ಬಸ್ ಬಿಡುವಂತೆ ಮಲೆನಾಡಿಗರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ಪಟ್ಟಿ ನೋಡಿದ್ರೆ ಎದೆ ನಡುಗುತ್ತೆ – ಹೆಚ್‌.ಡಿ ಕುಮಾರಸ್ವಾಮಿ

Share This Article