ಚಿಕ್ಕಮಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ (Gold Smuggling Case) ಕಂದಾಯ ಗುಪ್ತಚರ ನಿರ್ದೇಶನಾಲಯದಿಂದ (DRI) ಅರೆಸ್ಟ್ ಆಗಿರುವ ನಟಿ ರನ್ಯಾ ರಾವ್ (Ranya Rao) ಆಪ್ತನೊಬ್ಬನನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ನಗರದ ಹೊಸಮನೆ ಬಡಾವಣೆಯ ಕಾರು ಚಾಲಕ ದೀಪಕ್‍ನನ್ನು ಅಧಿಕಾರಿಗಳು ಗುರುವಾರ ಸಂಜೆ ವಶಕ್ಕೆ ಪಡೆದಿದ್ದು, ಮಾಹಿತಿ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ದೀಪಕ್ ಪಾತ್ರ ಇದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಎಲ್ಲಾ ಆಯಾಮಗಳಲ್ಲೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮಾ. 3 ರಂದು ದುಬೈನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ರನ್ಯಾಳನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ವೇಳೆ ಅವರು ಡಿಜಿಪಿ ರಾಮಚಂದ್ರರಾವ್ ಅವರ ಮಗಳು ಎಂದು ಹೇಳಿಕೊಂಡಿದ್ದಳು. ಅಲ್ಲದೇ ರನ್ಯಾಳನ್ನು ತಪಾಸಣೆ ಇಲ್ಲದೇ ಹೊರಗೆ ಕರೆತರಲು ವಿಮಾನ ನಿಲ್ದಾಣ ಠಾಣೆ ಹೆಡ್ ಕಾನ್‌ಸ್ಟೇಬಲ್ ಬಸವರಾಜ್ ತೆರಳಿದ್ದರು.
ಕೂಡಲೇ ರನ್ಯಾಳನ್ನು ಲೋಹ ಪರಿಶೋಧಕ ಕಚೇರಿಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ 1 ಕೆಜಿ ತೂಕದ 14 ಗೋಲ್ಡ್ ಬಿಸ್ಕೆಟ್ ತಂದಿರುವುದು ಪತ್ತೆಯಾಗಿತ್ತು. ತೊಡೆಯ ಭಾಗಕ್ಕೆ 14 ಬಿಸ್ಕೆಟ್‌ಗಳನ್ನು ಗಮ್ ಹಾಕಿ ಅಂಟಿಸಿಕೊಂಡು ಬಳಿಕ ಟೇಪ್‌ನಿಂದ ಸುತ್ತಿಕೊಂಡಿದ್ದಳು. ಯಾವುದೇ ಸ್ಕ್ಯಾನರ್‌ನಲ್ಲಿ ಅನುಮಾನ ಬಾರದಂತೆ ಕ್ರ್ಯಾಂಪ್ ಬ್ಯಾಂಡೇಜ್ ಹಾಕಿಕೊಂಡು ಬಂದಿದ್ದಳು. ಕೂಡಲೇ ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಿಸಿದಾಗದೇ ಆಕೆ ಪೊಲೀಸ್ ಅಧಿಕಾರಿಯ ಮಗಳು ಎನ್ನುವುದು ಬಯಲಾಗಿತ್ತು. ಬಳಿಕ ಆಕೆಯನ್ನು ಬಂಧಿಸಲಾಗಿತ್ತು.
ಮಾ.14 ರಂದು ರನ್ಯಾ ರಾವ್ ಜಾಮೀನು (Bail) ಅರ್ಜಿಯನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಮಾ.10 ರಂದು ಕೋರ್ಟ್ ರನ್ಯಾ ರಾವ್‌ಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿತ್ತು. ಹೀಗಾಗಿ ಮಾ.24 ರವರೆಗೆ ರನ್ಯಾ ರಾವ್ ಪರಪ್ಪನ ಅಗ್ರಹಾರದಲ್ಲೇ ಇರಲಿದ್ದಾಳೆ.