ನವದೆಹಲಿ: ಮೀಸಲಾತಿ ಪಡೆದುಕೊಳ್ಳದೆ ಇರುವುದೇ ಬ್ರಾಹ್ಮಣನಾದ ನನಗೆ ದೇವರು ಮಾಡಿದ ದೊಡ್ಡ ಆಶೀರ್ವಾದ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾತನಾಡಿದ್ದಾರೆ.
ನಾಗ್ಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾನು ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಒಪ್ಪುವುದಿಲ್ಲ. ಯಾವುದೇ ವ್ಯಕ್ತಿ ಜಾತಿ, ಧರ್ಮ ಅಥವಾ ಭಾಷೆಯಿಂದ ದೊಡ್ಡವನಲ್ಲ. ತನ್ನ ಗುಣಗಳಿಂದ ಮಾತ್ರ ದೊಡ್ಡವನಾಗುತ್ತಾನೆ. ನಾನು ಆಗಾಗ್ಗೆ ಒಂದು ತಮಾಷೆ ಮಾಡುತ್ತೇನೆ. ಅದೇನೆಂದರೆ, ದೇವರು ನನಗೆ ಮಾಡಿದ ದೊಡ್ಡ ಉಪಕಾರವೆಂದರೆ ನನಗೆ ಮೀಸಲಾತಿ ನೀಡದಿರುವುದು ಎಂದು ತಿಳಿಸಿದ್ದಾರೆ.
ಭಾರತದಲ್ಲಿನ ವಿವಿಧ ಪ್ರದೇಶಗಳಲ್ಲಿ ಬ್ರಾಹ್ಮಣರ ವಿಭಿನ್ನ ಸಾಮಾಜಿಕ ಪ್ರಭಾವದ ಬಗ್ಗೆ ಗಡ್ಕರಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಬ್ರಾಹ್ಮಣ ಸಮುದಾಯವು ಹೆಚ್ಚಿನ ಪ್ರಾಮುಖ್ಯತೆ ಅಥವಾ ಪ್ರಾಬಲ್ಯವನ್ನು ಹೊಂದಿಲ್ಲ. ಆದರೆ, ಉತ್ತರ ಪ್ರದೇಶ ಮತ್ತು ಬಿಹಾರದಂತಹ ಉತ್ತರ ರಾಜ್ಯಗಳಲ್ಲಿ ಅವರ ಉಪಸ್ಥಿತಿಯು ಗಮನಾರ್ಹವಾಗಿದೆ. ನಾನು ಅಲ್ಲಿಗೆ ಹೋದಾಗಲೆಲ್ಲಾ, ದುಬೆಗಳು, ಮಿಶ್ರಾಗಳು ಮತ್ತು ತ್ರಿಪಾಠಿಗಳು ಗಣನೀಯ ಸಾಮರ್ಥ್ಯ ಮತ್ತು ಪ್ರಭಾವ ಹೊಂದಿದ್ದಾರೆಂದು ನಾನು ನೋಡುತ್ತೇನೆ ಎಂದು ತಿಳಿಸಿದ್ದಾರೆ.
ನನ್ನ ತವರು ರಾಜ್ಯದಲ್ಲಿ ಮರಾಠರು ಪ್ರಬಲ ಸಾಮಾಜಿಕ ಮತ್ತು ರಾಜಕೀಯ ಪ್ರಾಮುಖ್ಯತೆಯನ್ನು ಹೊಂದಿದ್ದರೆ, ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಬ್ರಾಹ್ಮಣರು ಇದೇ ರೀತಿಯ ಸ್ಥಾನಮಾನವನ್ನು ಹೊಂದಿದ್ದಾರೆ ಎಂದು ಗಡ್ಕರಿ ಹೇಳಿದ್ದಾರೆ.