ಬೆಂಗಳೂರು: ಅಪ್ಪಟ ಕನ್ನಡತನದ ಶೀರ್ಷಿಕೆಯೊಂದಿಗೇ ಸದ್ದು ಮಾಡಿದ್ದ ಚಿತ್ರ ಗಿಣಿ ಹೇಳಿದ ಕಥೆ. ಇದೀಗ ಗಿಣಿ ಹೇಳಿದ ಕಥೆಯನ್ನು ಪ್ರೇಕ್ಷಕರು ಕೇಳಿದ್ದಾರೆ. ಯಾವ ಆಡಂಬರವೂ ಇಲ್ಲದ ಸಹಜ ಸುಂದರವಾದ ಪ್ರೀತಿ ಬೆರೆತ ಕಥೆ ಕೇಳಿದವರ ಕಣ್ಣುಗಳಲ್ಲಿ ಒಂದೊಳ್ಳೆ ಸಿನಿಮಾ ನೋಡಿದ ತೃಪ್ತಿಯ ಕಾಂತಿ ಸ್ಪಷ್ಟವಾಗಿಯೇ ಹೊಳೆಯುತ್ತಿದೆ. ಈ ಮೂಲಕ ರಂಗಭೂಮಿ ಪ್ರತಿಭೆಗಳ ಮಹಾ ಸಂಗಮದಂತಿರೋ ಈ ತಂಡಕ್ಕೆ ಆರಂಭಿಕವಾಗಿಯೇ ಗೆಲುವಿನ ಸೂಚನೆ ಸಿಕ್ಕಂತಾಗಿದೆ!
ದೇವ್ ರಂಗಭೂಮಿ ಬುದ್ಧ ಚಿತ್ರಾಲಯ ಬ್ಯಾನರಿನಡಿಯಲ್ಲಿ ನಿರ್ಮಿಸಿ ನಾಯಕನಾಗಿಯೂ ನಟಿಸಿರೋ ಚಿತ್ರ ಗಿಣಿ ಹೇಳಿದ ಕಥೆ. ಒಂದು ಪಯಣ, ಆ ದಾರಿಯಲ್ಲಿ ಡ್ರೈವರ್ ಒಬ್ಬ ಪ್ಯಾಸೆಂಜರುಗಳ ಬಳಿ ಹೇಳಿಕೊಳ್ಳೋ ಕಥೆ, ಅದಕ್ಕೆ ಅಪ್ಪಟ ಪ್ರೇಮದ ಕಂಪು ಮತ್ತು ಎಂಥವರನ್ನೂ ದಿಗಿಲಾಗಿಸುವ, ಕಸಿವಿಸಿಗೆ ತಳ್ಳುವಂಥಾದ್ದೊಂದು ಅನಿರೀಕ್ಷಿತ ದುರಂತ… ಇದಿಷ್ಟರ ನಡುವೆ ಗಿಣಿ ಹೇಳೋ ಕಥೆ ಯಾವ ಅಡೆತಡೆಗಳೂ ಇಲ್ಲದೆ ನೋಡಿಸಿಕೊಂಡು ಹೋಗುತ್ತದೆ.
Advertisement
Advertisement
ಈ ಕಥೆಯ ಕೇಂದ್ರ ಬಿಂದು ಬೆಂಗಳೂರಿನ ಡ್ರೈವರ್ ವೃತ್ತಿಯ ಯುವಕ. ಆತ ಗಣೇಶ್ ಅಲಿಯಾಸ್ ಗಿಣಿ. ಆ ಪಾತ್ರಕ್ಕೆ ದೇವ್ ರಂಗಭೂಮಿ ಜೀವ ತುಂಬಿದ್ದಾರೆ. ಈ ಮೂಲಕವೇ ಡ್ರೈವರ್ ಗಳ ಖಾಸಗೀ ಜಗತ್ತನ್ನು ಒಂದಷ್ಟು ಬೆರಗು ಹುಟ್ಟಿಸುವಂತೆ ತೆರೆದಿಟ್ಟಿದ್ದಾರೆ. ಈ ಡ್ರೈವರ್ ಕೊಡಗಿನತ್ತ ಪ್ಯಾಸೆಂಜರುಗಳನ್ನು ಕರೆದುಕೊಂಡು ಹೋಗುವಾಗ ತನ್ನ ಕಥೆ ಹೇಳಿಕೊಳ್ಳುತ್ತಾನೆ. ತಾನು ನಾಯಕಿಯ ಹಿಂದೆ ಸುತ್ತಿ ಪ್ರೀತಿ ದಕ್ಕಿಸಿಕೊಂಡಿದ್ದರಿಂದ ಮೊದಲ್ಗೊಂಡು ಮೋಹಕವಾಗಿಯೇ ಕಥೆ ಚಲಿಸುತ್ತೆ. ಆದರೆ ಏಕಾಏಕಿ ಆ ಹುಡುಗಿ ಕಣ್ಮರೆಯಾಗ್ತಾಳೆ. ಅದರ ಹಿಂದೊಂದು ಭೀಕರ ಕಾರಣವಿರುತ್ತೆ ಮತ್ತು ಈತ ಕರೆದೊಯ್ಯುತ್ತಿದ್ದ ಪ್ಯಾಸೆಂಜರುಗಳಿಗೂ ಆ ಹುಡುಗಿಯ ಸಾವಿನ ಸುತ್ತಲ ವಿದ್ಯಾಮಾನಗಳಿಗೆ ಲಿಂಕೂ ಇರುತ್ತೆ. ಅದೇನೆಂಬುದು ಗಿಣಿ ಹೇಳೋ ಕಥೆಯ ನಿಜವಾದ ಆತ್ಮ.
Advertisement
Advertisement
ನಾಯಕ ದೇವ್ ರಂಗಭೂಮಿ ಈ ಪಾತ್ರಕ್ಕೆ ತಾವೇ ಸೂಕ್ತ ಎಂಬ ಫೀಲ್ ಪ್ರೇಕ್ಷಕರಿಗೆ ಹುಟ್ಟುವಂತೆ ನಟಿಸಿದ್ದಾರೆ. ನಾಯಕಿ ಗೀತಾಂಜಲಿ ಕೂಡಾ ಮೊದಲ ಅನುಭವವಾದರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಇನ್ನು ಹೆಚ್ಚಿನ ಪಾತ್ರಗಳನ್ನು ರಂಗಭೂಮಿ ಕಲಾವಿದರು ನುಂಗಿಕೊಂಡಂತೆ ನಟಿಸಿದ್ದಾರೆ. ರಾಜ ನೇಸರ ಅವರು ಬರೆದಿರೋ ಹಾಡೂ ಸೇರಿದಂತೆ ಎಲ್ಲವೂ ಇಂಪಾಗಿವೆ. ಕ್ಯಾಮೆರಾ ಕೆಲಸವೂ ಮುದ ನೀಡುತ್ತದೆ. ಸಂಕಲನದ ಕೆಲಸವೂ ಗಮನ ಸೆಳೆಯುವಂತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv