ಭೋಪಾಲ್: ಇಂದೋರ್ನಲ್ಲಿ (Indore) ನಡೆಯುತ್ತಿದ್ದ ಗರ್ಬಾ (Garba) ನೃತ್ಯದ ಕಾರ್ಯಕ್ರಮದ ವೇಳೆ 15 ವರ್ಷದ ಬಾಲಕಿಯ ಜೊತೆ ಬಿಜೆಪಿ ನಾಯಕನೊಬ್ಬ ಅಸಭ್ಯವಾಗಿ ವರ್ತಿಸಿ ಹೊರಗೆ ತಳ್ಳಿದ್ದಾನೆ. ಆತನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ಬಿಜೆಪಿ ಮಂಡಲ ಅಧ್ಯಕ್ಷ ಕಮಲ್ ಚೌಹಾಣ್, ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪಿಯಾಗಿದ್ದಾನೆ. ಹೀರಾ ನಗರ ಪ್ರದೇಶದಲ್ಲಿ ನಡೆದ ‘ಕಂಕೇಶ್ವರಿ ಗರ್ಬಾ ಉತ್ಸವ’ದ ವೇಳೆ ಈ ಘಟನೆ ನಡೆದಿದೆ. ಆರೋಪಿ ಬಾಲಕಿಯನ್ನು ತಳ್ಳಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: `ಜೀವನ ಅನ್ಯಾಯ ಮಾಡ್ಬಿಡ್ತು ಅಮ್ಮʼ – ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾದ ಬಿಕಾಂ ವಿದ್ಯಾರ್ಥಿನಿ
ಗರ್ಬಾ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯುವ ವಿಚಾರದಲ್ಲಿ ಜಗಳ ನಡೆದಿದೆ. ಈ ವೇಳೆ ತನ್ನನ್ನು ತಳ್ಳಿ ಕಾರ್ಯಕ್ರಮದ ಸ್ಥಳದಿಂದ ಹೊರಗೆ ಕಳುಹಿಸಲಾಯಿತು ಎಂದು ಅಪ್ರಾಪ್ತ ಬಾಲಕಿ ದೂರು ದಾಖಲಿಸಿದ್ದಾಳೆ. ದೂರಿನ ಅನ್ವಯ ಪೊಲೀಸರು ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ’ (POCSO Act) ಮತ್ತು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 74ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ 15 ವರ್ಷದ ಬಾಲಕಿ ಮತ್ತು ಚೌಹಾಣ್ ನಡುವೆ ತೀವ್ರ ವಾಗ್ವಾದ ನಡೆಯುತ್ತಿರುವುದು ದಾಖಲಾಗಿದೆ. ಈ ವೇಳೆ ಚೌಹಾಣ್, “ಇಲ್ಲಿಂದ ಹೊರಗೆ ಹೋಗು” ಎಂದು ಹೇಳುತ್ತಾ, ಬಾಲಕಿಯನ್ನು ಪೆಂಡಾಲ್ನಿಂದ ಹೊರಗೆ ತಳ್ಳಿದ್ದಾನೆ. ಇದಕ್ಕೆ ಪ್ರತಿಯಾಗಿ ಬಾಲಕಿ, “ನನ್ನನ್ನು ಮುಟ್ಟುವ ಧೈರ್ಯ ಮಾಡಬೇಡಿ” ಎಂದು ಎಚ್ಚರಿಸಿದ್ದಾಳೆ. ಈ ಮಧ್ಯೆ ಇತರರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಲು ಮುಂದಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಕಮ್ರಕ್ಕೆ ಕಾಂಗ್ರೆಸ್ ಒತ್ತಾಯ
ಈ ಘಟನೆಯನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದ್ದು, ಬಿಜೆಪಿ ನಾಯಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಅಲ್ಲದೆ, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಘನತೆಯ ವಿಷಯದಲ್ಲಿ ಬಿಜೆಪಿ ಪಕ್ಷದ ಬದ್ಧತೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದೆ. ಇದರೊಂದಿಗೆ ಕಮಲ್ ಚೌಹಾಣ್ನನ್ನು ಪಕ್ಷದಿಂದ ಉಚ್ಚಾಟಿಸಬೇಕು. ಮಂಡಲ ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕಬೇಕು ಎಂದು ಕಾಂಗ್ರೆಸ್ ಪಕ್ಷವು ಬಿಜೆಪಿ ರಾಜ್ಯಾಧ್ಯಕ್ಷ ಹೇಮಂತ್ ಖಂಡೇಲ್ವಾಲ್ ಅವರಿಗೆ ಒತ್ತಾಯಿಸಿದೆ. ಇದನ್ನೂ ಓದಿ: ಬಾಂಗ್ಲಾದೇಶದ ಬೀಚ್ ರೆಸಾರ್ಟ್ನಲ್ಲಿ ಅಗ್ನಿ ಅವಘಡ; ಮಕ್ಕಳೂ ಸೇರಿ 10 ಮಂದಿ ಸಾವು
