ಬೆಂಗಳೂರು: ಹಳೆ ವಿಮಾನ ನಿಲ್ದಾಣ ರಸ್ತೆಯ ವಿಂಡ್ ಟನಲ್ ಜಂಕ್ಷನ್‌ನಲ್ಲಿ ಕೈಗೆತ್ತಿಕೊಂಡಿರುವ ಕೆಳಸೇತುವೆ ಕಾಮಗಾರಿಯನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ 3 ತಿಂಗಳೊಳಗಾಗಿ ಪೂರ್ಣಗೊಳಿಸಲು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಹಳೆ ವಿಮಾನ ನಿಲ್ದಾಣ ರಸ್ತೆಯ ಯು.ಆರ್.ರಾವ್ ಉಪಗ್ರಹ ಕೇಂದ್ರದ ಬಳಿಯಿರುವ ವಿಂಡ್ ಟನಲ್ ಜಂಕ್ಷನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಈ ರಸ್ತೆಯು ಹೆಚ್ಚಿನ ಸಂಚಾರ ದಟ್ಟಣೆಯುಳ್ಳ ಪ್ರದೇಶವಾಗಿರುವುದರಿಂದ ಹೆಚ್ಚುವರಿ ಯಂತ್ರೋಪಕರಣಗಳನ್ನು ಬಳಸಿಕೊಂಡು, ಮೂರು ಪಾಳಿಗಳಲ್ಲಿ ಕಾಮಗಾರಿ ನಡೆಸಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ನಿರ್ದೇಶನ ನೀಡಿದರು.

ಕೆಳಸೇತುವೆ ಕಾಮಗಾರಿಗೆ ಸಂಚಾರಿ ಪೊಲೀಸ್ ವಿಭಾಗವು ಈಗಾಗಲೇ ಅನುಮತಿ ನೀಡಿದ್ದು, ಹೆಚ್.ಎ.ಎಲ್ ಕಡೆಯಿಂದ ನಗರದೊಳಗೆ ಬರುವ ರಸ್ತೆ ಭಾಗದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿ ಆರ್.ಸಿ.ಸಿ ಗೋಡೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಸದರಿ ಭಾಗದಲ್ಲಿ ಇರುವ ಜಲಮಂಡಳಿ ಪೈಪ್‌ಲೈನ್, ಕೇಬಲ್ ಸೇರಿದಂತೆ ಇತರೆ ಉಪಯುಕ್ತತೆಗಳನ್ನು ಸಮಾನಾಂತರವಾಗಿ ಸ್ಥಳಾಂತರಿಸಿ ಕಾಮಗಾರಿ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ವಿಂಡ್ ಟನಲ್ ಜಂಕ್ಷನ್‌ನಲ್ಲಿ 19 ಕೋಟಿ ರೂ. ವೆಚ್ಚದಲ್ಲಿ 300 ಮೀಟರ್ ಉದ್ದದ ಕೆಳಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಎರಡೂ ಬದಿಗಳಲ್ಲಿ 7.5 ಮೀಟರ್ ಅಗಲದ 6 ಪಥಗಳ ಕೆಳಸೇತುವೆ ನಿರ್ಮಿಸಲಾಗುತ್ತಿದೆ. ಪ್ರಸ್ತುತ ಒಂದು ಭಾಗದಲ್ಲಿ ಉಪಯುಕ್ತತೆಗಳ ಸ್ಥಳಾಂತರ, ಆರ್.ಸಿ.ಸಿ ಗೋಡೆ ನಿರ್ಮಾಣ, ಸರ್ವೀಸ್ ರಸ್ತೆ ನಿರ್ಮಾಣ ಹಾಗೂ ಮಧ್ಯಭಾಗದಲ್ಲಿ ಅಳವಡಿಸುವ ಬಾಕ್ಸ್ಗಳ ತಯಾರಿಕೆ ಸೇರಿದಂತೆ ಶೇ.60 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಕಾರ್ಯಪಾಲಕ ಅಭಿಯಂತರರು ಮಾಹಿತಿ ನೀಡಿದರು.

ಕಾಮಗಾರಿಯ ವೇಳೆ ಹೆಚ್ಚುವರಿ ರಸ್ತೆ ನಿರ್ಮಾಣ:
ಕೆಳಸೇತುವೆ ಕಾಮಗಾರಿ ನಡೆಯುವ ಅವಧಿಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಆಗದಂತೆ ಜಂಕ್ಷನ್‌ನ ಎರಡೂ ಬದಿಗಳಲ್ಲಿರುವ ರಕ್ಷಣಾ, ಇಸ್ರೋ, ಎನ್.ಎ.ಎಲ್. ಇಲಾಖೆ ಹಾಗೂ ಖಾಸಗಿ ಜಾಗಗಳಲ್ಲಿ ತಾತ್ಕಾಲಿಕ ರಸ್ತೆಗಳನ್ನು ನಿರ್ಮಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
ಕೆಳಸೇತುವೆ ಕಾಮಗಾರಿಯ ಹಂತಗಳು:
ಮೊದಲ ಹಂತದಲ್ಲಿ ಉಪಯುಕ್ತತೆಗಳ ಸ್ಥಳಾಂತರ ಹಾಗೂ ತಡೆಗೋಡೆ ನಿರ್ಮಾಣ ಮಾಡಲಾಗುವುದು. ಎರಡನೇ ಹಂತದಲ್ಲಿ ಮಧ್ಯಭಾಗಕ್ಕೆ ಸಿದ್ಧಪಡಿಸಿರುವ ಬಾಕ್ಸ್ಗಳನ್ನು ಅಳವಡಿಸಲಾಗುವುದು. ಮೂರನೇ ಹಂತದಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಿಸಲಾಗುವುದು.
ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ:
ಕೆಳಸೇತುವೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಸೂಚನಾ ಫಲಕಗಳು, ಬ್ಯಾರಿಕೇಡ್‌ಗಳು, ಕಾಷನ್ ಟೇಪ್‌ಗಳನ್ನು ಅಳವಡಿಸುವುದರೊಂದಿಗೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದAತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

17 ಕಿ.ಮೀ ರಸ್ತೆ ಸಮಗ್ರ ಅಭಿವೃದ್ಧಿ:
ಹಳೆ ವಿಮಾನ ನಿಲ್ದಾಣ ರಸ್ತೆಯ ಎ.ಎಸ್.ಇ ಜಂಕ್ಷನ್‌ನಿಂದ ಹೋಫ್ ಫಾರ್ಮ್ ಜಂಕ್ಷನ್ ವರೆಗಿನ 17 ಕಿ.ಮೀ ಉದ್ದದ ಮಾರ್ಗವನ್ನು 3 ಕೆಳಸೇತುವೆಗಳನ್ನು ಒಳಗೊಂಡಂತೆ ಸಮಗ್ರವಾಗಿ ಅಭಿವೃದ್ಧಿಪಡಿಸಲು 2015 ರಲ್ಲಿ ಕಾರ್ಯಾದೇಶ ನೀಡಲಾಗಿತ್ತು. ಅದರಂತೆ, 2022ರಲ್ಲಿ ಕುಂದಲಹಳ್ಳಿ ಜಂಕ್ಷನ್ ಹಾಗೂ 2023 ರಲ್ಲಿ ಸುರಂಜನ್ ದಾಸ್ ಜಂಕ್ಷನ್‌ನಲ್ಲಿ ಕೆಳಸೇತುವೆ ಕಾಮಗಾರಿಗಳು ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ವಿಂಡ್ ಟನಲ್ ಜಂಕ್ಷನ್‌ನ ಕಾಮಗಾರಿಗೆ ಸಂಚಾರಿ ಪೊಲೀಸ್ ವಿಭಾಗದಿಂದ ಅನುಮತಿ ಲಭ್ಯವಾಗದ ಕಾರಣ ವಿಳಂಬವಾಗಿತ್ತು. ಇದೀಗ ಪೊಲೀಸ್ ಅನುಮತಿ ದೊರೆತಿರುವುದರಿಂದ 3 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ.
ಈ ವೇಳೆ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

