ಬೆಳಗಾವಿ: ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಪೂಜೆಗೂ ಮುನ್ನ ಗಣಪತಿ ವಿಸರ್ಜನೆಗೊಂಡಿದ್ದು, ನೂರಾರು ಜನರ ಬದುಕು ಬೀದಿಗೆ ಬಿದ್ದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಗಣಪತಿ ಹಬ್ಬ ಬಂದರೆ ರಾಜ್ಯ ಹೊರ ರಾಜ್ಯದ ಜನರು ಇಲ್ಲಿಗೆ ಬಂದು ಗಣಪತಿ ಮೂರ್ತಿಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಉಲ್ಟಾ ಆಗಿದೆ. ತಯಾರಾಗಿ ಮನೆ ಮನೆಗೆ ಹೋಗಿ ಪೂಜೆ ಸಲ್ಲಿಸಿಕೊಂಡು ವಿಸರ್ಜನೆಯಾಗುತ್ತಿದ್ದ ಗಣಪತಿ ಇದೆಲ್ಲದಕ್ಕೂ ಮುನ್ನವೇ ವಿಸರ್ಜನೆಯಾಗಿದ್ದಾನೆ.
Advertisement
Advertisement
ಕಳೆದ 25 ದಿನಗಳ ಹಿಂದಷ್ಟೇ ಘಟಪ್ರಭಾ ನದಿಯಿಂದ ಒಂದೂವರೆ ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ್ದಕ್ಕೆ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಕೂಡ ನೀರು ನುಗ್ಗಿ 30ಕ್ಕೂ ಅಧಿಕ ಮನೆಗಳು ಧರೆಗುರುಳಿದರೆ, ಇದೆಲ್ಲದಕ್ಕಿಂತ ಹೆಚ್ಚಾಗಿ ಈ ಗ್ರಾಮದಲ್ಲಿ ಗಣಪತಿ ತಯಾರಿಸುತ್ತಿದ್ದ ಘಟಕಗಳು ಮುಳುಗಿ ದೇವರೇ ಕರಗಿದ ಸ್ಥಿತಿ ನಿರ್ಮಾಣವಾಗಿದೆ. ಕೊಣ್ಣೂರು ಗ್ರಾಮದಲ್ಲಿ ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಗಣಪತಿಗಳನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ತಲೆತಲಾಂತರದಿಂದ ಅನೇಕ ಕುಟುಂಬಗಳು ಇದನ್ನೇ ವೃತ್ತಿ ಮಾಡಿಕೊಂಡಿದ್ದು ಗಣಪತಿ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. 1962ರಲ್ಲಿ ಎಲ್ಲ ಕುಂಬಾರರು ಸೇರಿಕೊಂಡು ಕಾಡಸಿದ್ದೇಶ್ವರ ಇಟ್ಟಂಗಿ ಮತ್ತು ಕುಂಬಾರಿಕೆ ಸಾಮಾನುಗಳು ಉತ್ಪಾದಕ ಸಹಕಾರಿ ಸಂಘ ಮಾಡಿಕೊಂಡು ಈ ಸಂಘದ ಮೂಲಕ ಗಣಪತಿಗಳನ್ನು ತಯಾರಿಸಿಕೊಂಡು ಬರುತ್ತಿದ್ದು ಜಲಪ್ರವಾಹಕ್ಕೆ ಈಗ ಎಲ್ಲವೂ ಹಾನಿಯಾಗಿ ಕಂಗಾಲಾಗಿದ್ದಾರೆ.
Advertisement
Advertisement
ಪ್ರತಿ ವರ್ಷ ಇಲ್ಲಿ 6 ಲಕ್ಷ ಗಣಪತಿಗಳನ್ನು ತಯಾರು ಮಾಡುತ್ತಾರೆ. ಈ ವರ್ಷ ಜಲಪ್ರವಾಹಕ್ಕೆ ಸಿಲುಕಿ ಸುಮಾರು 5 ಲಕ್ಷ ಗಣಪತಿಗಳು ನೀರಿನಲ್ಲಿ ಕರಗಿ ಮಣ್ಣಾಗಿವೆ. ಉಳಿದ ಒಂದು ಲಕ್ಷ ಗಣಪತಿಗೆ ಕಲರಿಂಗ್ ಮಾಡಿಕೊಂಡು ಗ್ರಾಮದವರಿಗೆ ಹಾಗೂ ಅಕ್ಕಪಕ್ಕದವರಿಗೆ ಮಾರಾಟ ಮಾಡುತ್ತಿದ್ದಾರೆ. ಆದರೆ 5 ಲಕ್ಷ ಗಣಪತಿಗಳು ಹಾಳಾಗಿದ್ದಕ್ಕೆ ಸುಮಾರು 3 ಕೋಟಿಗೂ ಅಧಿಕ ಹಾನಿ ಇವರದ್ದಾಗಿದೆ. ನೀರು ಬಂದ ದಿನಾಂಕದಿಂದಲೇ ಇಲ್ಲಿ ಗಣಪತಿಗಳು ಮಾರಾಟವಾಗುತ್ತಿದ್ದವು. ಆದರೆ ದುರಾದೃಷ್ಟವಶಾತ್ ಆ ದಿನವೇ ಇಡೀ ಗ್ರಾಮಕ್ಕೆ ನೀರು ನುಗ್ಗಿ ಎಂಟು ದಿನಗಳ ಕಾಲ ನೀರು ನಿಂತಿದ್ದಕ್ಕೆ ಎಲ್ಲಾ ಗಣಪತಿಗಳು ನೀರಲ್ಲೇ ಕರಗಿ ಮಣ್ಣಾಗಿ ಬಿಟ್ಟಿವೆ. 50 ರೂ. ಸಣ್ಣ ಗಣಪತಿಯಿಂದ ಹಿಡಿದು 30 ಸಾವಿರ ರೂ.ವರೆಗೂ ಇಲ್ಲಿ ಗಣಪತಿಗಳನ್ನು ಸಿದ್ಧಪಡಿಸುತ್ತಾರೆ.
ಇಲ್ಲಿ ಪಿಒಪಿ ಗಣಪತಿಗಳನ್ನು ನಿರ್ಮಾಣ ಮಾಡುವುದಿಲ್ಲ. ಎಲ್ಲವೂ ಮಣ್ಣಿನಿಂದಲೇ ಸಿದ್ಧಪಡಿಸುತ್ತಾರೆ. ಸರ್ಕಾರ ಪರಿಸರ ಸ್ನೇಹಿ ಗಣಪತಿ ಕಡ್ಡಾಯ ಮಾಡಿದ ಮೇಲೆ ಅತೀ ಹೆಚ್ಚು ಪರಿಸರ ಸ್ನೇಹಿ ಗಣಪತಿಗಳನ್ನು ನಿರ್ಮಾಣ ಮಾಡುವ ಏಕೈಕ ಗ್ರಾಮ ಇದಾಗಿದೆ. ಸರ್ಕಾರ ಕಡ್ಡಾಯ ಮಾಡಿದ ಮೇಲೆ ಈ ಗಣಪತಿಗಳಿಗೆ ಹೆಚ್ಚಿನ ಗಣಪತಿಗಳನ್ನ ಇದೇ ವರ್ಷ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಈ ಬಾರಿಯೇ ನೆರೆ ಬಂದು ಎಲ್ಲ ಗಣಪತಿಗಳು ಹಾಳಾಗಿದ್ದು, ಈ ಕುಂಬಾರರ ಬದುಕು ಬೀದಿಗೆ ಬಂದಿದೆ.
ಇಷ್ಟೆಲ್ಲಾ ಸಂಕಷ್ಟದಲ್ಲಿ ಜನರಿದ್ದರೂ ಅನರ್ಹ ಹಾಗೂ ಈ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ರಮೇಶ್ ಜಾರಕಿಹೊಳಿ ಮಾತ್ರ ಇತ್ತ ತಿರುಗಿಯೂ ನೋಡಿಲ್ಲ. ತಮಗೆ ಆಗಿರುವ ಹಾನಿ ಹಾಗೂ ಅದಕ್ಕೆ ಬೇಕಾದ ಪರಿಹಾರ ನೀಡಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಎಲ್ಲ ಕುಂಬಾರರು ಸೇರಿಕೊಂಡು ಮನವಿ ಕೂಡ ನೀಡಿದ್ದಾರೆ. ಇಷ್ಟಾದರೂ ಇಲ್ಲಿವರೆಗೂ ಜಿಲ್ಲಾಡಳಿತ ಇವರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ.