ಗದಗ: ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ತಮ್ಮ ತಮ್ಮ ಸಂಸಾರವನ್ನು ಉಳಿಸಿಕೊಳ್ಳಲು ಗದಗ ತಾಲೂಕಿನ ಹಾತಲಗೇರಿ ಗ್ರಾಮ ಮಹಿಳೆಯರು ಟೊಂಕ ಕಟ್ಟಿ ನಿಂತಿದ್ದಾರೆ.
ಮುಂಜಾನೆ ಕೋಳಿ ಕೂಗೋದೇ ತಡ ಮನೆಯ ಗಂಡಸರು ಮದ್ಯದ ಅಂಗಡಿಯಲ್ಲಿ ಹಾಜರಿರುತ್ತಾರೆ. ಅಷ್ಟೇ ಅಲ್ಲದೇ ಬೆಳ್ಳಂಬೆಳಗ್ಗೆ ಪಾನ ಮತ್ತರಾಗಿರುತ್ತಾರೆ. ಇದನ್ನೆಲ್ಲಾ ನೋಡಿ ಆಕ್ರೋಶಗೊಂಡ ಮಹಿಳೆಯರು ಮದ್ಯ ಮಾರಾಟವನ್ನು ನಿಲ್ಲಿಸಲು ಮಾರಾಟಗಾರರ ಮನೆಗೆ ನುಗ್ಗಿ ಅಕ್ರಮ ಮದ್ಯವನ್ನು ಚರಂಡಿಗೆ ಸುರಿದು ಬಾಟಲ್‍ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ್ದಾರೆ.
Advertisement
Advertisement
ಗ್ರಾಮದ ನಿವಾಸಿಗಳಾದ ಸೂರಪ್ಪ ಹಾಗೂ ಬಸವರಾಜ ಮಾನೇದ ಎಂಬುವರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದರು. ನಾವು ಎಷ್ಟು ಹೇಳಿದರೂ ಅಕ್ರಮ ಮಾರಾಟವನ್ನು ನಿಲ್ಲಿಸಲಿಲ್ಲ. ಆದ್ದರಿಂದ ಅವರ ಮೇಲೆ ಹಲ್ಲೆಗೆ ಯತ್ನಿಸಿದೆವು. ಈ ಸಂದರ್ಭದಲ್ಲಿ ಮದ್ಯ ಮಾರಾಟಗಾರರ ಕುಟುಂಬಸ್ಥರಿಂದ ತೀವ್ರ ವಿರೋಧ ವ್ಯಕ್ತಪಡಿಸಿದರು. ನಂತರ ನಾವು ಇದರಿಂದ ನಮ್ಮ ಕುಟುಂಬಗಳು ಹಾಳಾಗುತ್ತಿದೆ. ನಮ್ಮ ಮಾಂಗಲ್ಯ ಉಳಿಸಿ ಎಂದು ಅಂಗಲಾಚಿದೆವು ಎಂದು ಗ್ರಾಮಸ್ಥೆ ಮಲ್ಲಮ್ಮ ತಿಳಿಸಿದ್ದಾರೆ.
Advertisement
ಅಕ್ರಮ ಮದ್ಯ ದಂಧೆಕೋರರನ್ನು ಹಿಗ್ಗಾ ಮುಗ್ಗಾ ಎಳೆದಾಡಿ ಗಲಾಟೆ ನಡೆಸಿದ್ದು, ಮನೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮನೆಯ ಸದಸ್ಯರ ಮತ್ತು ಗ್ರಾಮಸ್ಥರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಜಗಳ ಆರಂಭವಾಯಿತು. ನಂತರ ಆಕ್ರೋಶಗೊಂಡ ಮಹಿಳೆಯರು ಮದ್ಯವನ್ನು ಚರಂಡಿಗೆ ಸುರಿದು, ಬೆಂಕಿ ಹಚ್ಚಿ ಆಕ್ರೋಶವನ್ನು ವ್ಯಕ್ತಪಡಿಸಿದ ಜನರು ಇನ್ನು ಮುಂದೆ ಮಾರಾಟ ಮಾಡಿದರೆ ಮನೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆಯೊಡ್ಡಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಸಹ ಈ ದಂಧೆಕೋರರ ಜೊತೆ ಶಾಮಿಲಾಗಿದ್ದಾರೆ ಎಂದು ಸ್ಥಳೀಯ ನಿವಾಸಿ ಸತೀಶ್ ಆರೋಪಿಸಿದರು.
Advertisement
ಈ ಅಕ್ರಮ ಮದ್ಯ ಮಾರಾಟ ಕಳೆದ ಎರಡು-ಮೂರು ವರ್ಷಗಳಿಂದ ಹಲವಾರು ಗ್ರಾಮದಲ್ಲಿ ನಡೆಯುತ್ತಿದ್ದು, ಅಧಿಕಾರಿಗಳು ದಂಧೆಕೋರರಿಂದ ಕಮೀಷನ್ ತೆಗೆದುಕೊಂಡು ಈ ಅವ್ಯವಹಾರಕ್ಕೆ ಬೆಂಬಲ ನೀಡುತ್ತಿದ್ದಾರೆ. ಇದರ ಬಗ್ಗೆ ಪ್ರಾಮಾಣಿಕ ತನಿಖೆ ಆಗಬೇಕು. ಅಷ್ಟೇ ಅಲ್ಲದೇ ಹಾತಲಗೇರಿ ಗ್ರಾಮವನ್ನು ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.