ನವದೆಹಲಿ: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ (Fuel Price Hike) ಹಿನ್ನೆಲೆ ಟ್ಯಾಕ್ಸಿ ಮತ್ತು ಆಟೋ ದರಗಳ ತಕ್ಷಣ ಹೆಚ್ಚಳಕ್ಕೆ ಆಗ್ರಹಿಸಿ ದೆಹಲಿಯ ವಾಣಿಜ್ಯ ವಾಹನ ಚಾಲಕರ ಸಂಘಗಳು ಪ್ರತಿಭಟನೆಗೆ ಕರೆ ನೀಡಿವೆ. ಮೇ 21 ರಿಂದ 23ರವರೆಗೆ ಮೂರು ದಿನಗಳ ಕಾಲ ದೆಹಲಿಯಲ್ಲಿ (Delhi) ಮುಷ್ಕರ ನಡೆಯಲಿದೆ.
ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್‌ನ ನೇತೃತ್ವದಲ್ಲಿ ಚಾಲಕ ಶಕ್ತಿ ಯೂನಿಯನ್‌ನಂತಹ ಸಂಘಟನೆಗಳು ದೆಹಲಿ ಲೆಫ್ಟಿನೆಂಟ್ ಗವರ್ನರ್ ತರಂಜಿತ್ ಸಿಂಗ್ ಸಂಧು ಮತ್ತು ಮುಖ್ಯಮಂತ್ರಿ ರೇಖಾ ಗುಪ್ತ ಅವರಿಗೆ ಈಗಾಗಲೇ ದರ ಹೆಚ್ಚಳಕ್ಕೆ ಮನವಿ ಸಲ್ಲಿಸಿವೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ – ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಹೇಗಿದೆ ಇಂದಿನ ದರ?
ಚಾಲಕ ಶಕ್ತಿ ಯೂನಿಯನ್ ಉಪಾಧ್ಯಕ್ಷ ಅನುಜ್ ಕುಮಾರ್ ರಾಠೋರ್ ಮಾತನಾಡಿ, ಸಿಎನ್‌ಜಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ನಿರಂತರ ಏರಿಕೆಯಿಂದ ಮಧ್ಯಮ ವರ್ಗದ ಚಾಲಕರು ಕುಟುಂಬ ಪೋಷಣೆಗೆ ಹೆಣಗಾಡುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ದೆಹಲಿಯ ಇತರ ಸಂಘಟನೆಗಳೊಂದಿಗೆ ಸಮನ್ವಯಗೊಳಿಸಿ ಮೇ 21 ರಿಂದ 23 ರ ವರೆಗೂ ವಾಹನಗಳನ್ನು ನಿರ್ಬಂಧಿಸುವಂತೆ ಮುಷ್ಕರಕ್ಕೆ ಕರೆ ನೀಡಲಾಗಿದೆ. ಸರ್ಕಾರ ತಕ್ಷಣ ದರಗಳನ್ನು ಹೆಚ್ಚಿಸಿ ಅಧಿಸೂಚನೆ ಹೊರಡಿಸದಿದ್ದರೆ, ದೊಡ್ಡಮಟ್ಟದ ಪ್ರತಿಭಟನೆಗೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ದೆಹಲಿ ಹೈಕೋರ್ಟ್ ನಿರ್ದೇಶನದ ಹೊರತಾಗಿಯೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ದರ ಹೆಚ್ಚಳದ ಕಡತ ಈಗಾಗಲೇ ಲೆಫ್ಟಿನೆಂಟ್ ಗವರ್ನರ್ ಅನುಮೋದನೆಗಾಗಿ ಕಳುಹಿಸಿದೆ, ಅವರು ಸಹಿ ಹಾಕಿಲ್ಲ. ಸುಮಾರು 15 ವರ್ಷಗಳಿಂದ ದರಗಳನ್ನು ಹೆಚ್ಚಿಸಿಲ್ಲ. ಕೂಡಲೇ ದರ ಪರಿಷ್ಕರಣೆಯಾಗಬೇಕು. ಆನ್‌ಲೈನ್ ಕ್ಯಾಬ್ ಕಂಪನಿಗಳ ಅನಿಯಂತ್ರಿತ ಬೆಲೆ ನಿಗದಿಪಡಿಸುವುದರ ವಿರುದ್ಧ ಕ್ರಮಗಳಾಗಬೇಕು. ಚಾಲಕರ ಆರ್ಥಿಕ ಶೋಷಣೆಗೆ ಕಾನೂನು ರಕ್ಷಣೆ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ. ಈ ಮುಷ್ಕರದಿಂದ ದೆಹಲಿ-ಎನ್‌ಸಿಆರ್‌ನಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ತೀವ್ರ ಅಸೌಕರ್ಯ ಉಂಟಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ದೇಶದ ಜನರಿಗೆ ಬೆಳ್ಳಂಬೆಳಗ್ಗೆ ಶಾಕ್ – ಪೆಟ್ರೋಲ್, ಡೀಸೆಲ್ ದರ 90 ಪೈಸೆ ಹೆಚ್ಚಳ

