ABVPಯಿಂದ ತೆಲಂಗಾಣ ಸಿಎಂ ಹುದ್ದೆಯವರೆಗೆ – ರೇವಂತ್ ರೆಡ್ಡಿ ಹಿನ್ನೆಲೆ ಏನು?

Public TV
3 Min Read
Revanth Reddy 4

ನವದೆಹಲಿ: ತೆಲಂಗಾಣದ (Telangana) ನೂತನ ಮುಖ್ಯಮಂತ್ರಿಯಾಗಿ (CM) ರೇವಂತ್ ರೆಡ್ಡಿ (Revanth Reddy) ಆಯ್ಕೆಯಾಗಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೇರಿದ್ದ ಕಾಂಗ್ರೆಸ್ (Congress) ಮಂಗಳವಾರ ಎಐಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಸುದೀರ್ಘ ಚರ್ಚೆ ಬಳಿಕ ಶಾಸಕರ ಅಭಿಪ್ರಾಯದ ಮೇರೆಗೆ ರೇವಂತ್ ರೆಡ್ಡಿ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಲಾಗಿದೆ.

Revanth Reddy 1 1

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ರೇವಂತ್ ರೆಡ್ಡಿ ಹೆಸರು ಘೋಷಿಸಿದರು. ನಾಳೆ ಬೆಳಗ್ಗೆ 11 ಗಂಟೆಗೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಈ ನಡುವೆ ರೇವಂತ್ ರೆಡ್ಡಿ ಯಾರು? ಅವರ ರಾಜಕೀಯ ಪ್ರಭಾವ ಎಷ್ಟಿದೆ? ಅವರನ್ನು ಸಿಎಂ ಮಾಡಲು ಕಾರಣಗಳೇನು? ಎಂದು ಚರ್ಚೆಯಾಗುತ್ತಿದೆ.

REVANTH REDDY

ಸದ್ಯ ತೆಲಂಗಾಣ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿರುವ ರೇವಂತ್ ರೆಡ್ಡಿ ಅವರು 1967ರ ನವೆಂಬರ್ 8 ರಂದು ಅವಿಭಜಿತ ಆಂಧ್ರಪ್ರದೇಶದ ನಾಗರ್‌ಕರ್ನೂಲ್‌ನ ಕೊಂಡರೆಡ್ಡಿ ಪಲ್ಲಿ ಎಂಬ ಸ್ಥಳದಲ್ಲಿ ಜನಿಸಿದರು. ರೇವಂತ್ ತಂದೆಯ ಹೆಸರು ಅನುಮುಲ ನರಸಿಂಹ ರೆಡ್ಡಿ ಮತ್ತು ತಾಯಿ ಅನುಮುಲಾ ರಾಮಚಂದ್ರಮ್ಮ. ಅವರು ಹೈದರಾಬಾದಿನ ಎವಿ ಕಾಲೇಜಿನಲ್ಲಿ (ಉಸ್ಮಾನಿಯಾ ವಿಶ್ವವಿದ್ಯಾನಿಲಯ) ಲಲಿತಕಲೆಯಲ್ಲಿ ಪದವಿ ಪಡೆದಿದ್ದಾರೆ. ಕಾಲೇಜಿನ ಬಳಿಕ ಪ್ರಿಂಟಿಂಗ್ ಪ್ರೆಸ್ ಆರಂಭಿಸಿದರು.

Revanth Reddy 3

1992ರ ಮೇ 7 ರಂದು ರೇವಂತ್ ರೆಡ್ಡಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಜೈಪಾಲ್ ರೆಡ್ಡಿ ಅವರ ಸೋದರ ಸೊಸೆ ಅನುಮುಲಾ ಗೀತಾ ಅವರನ್ನು ವಿವಾಹವಾದರು. ಆದರೆ ಆರಂಭದಲ್ಲಿ ವೃತ್ತಿ ಆಯ್ಕೆಯಿಂದಾಗಿ ಕುಟುಂಬ ಸದಸ್ಯರು ಈ ಸಂಬಂಧವನ್ನು ವಿರೋಧಿಸಿದ್ದರು. ಬಳಿಕ ಮನೆಯವರು ಒಪ್ಪಿ ಗೀತಾ ಜತೆ ವೈವಾಹಿಕ ಸಂಬಂಧ ಆರಂಭಿಸಿದ್ದರು. ಅವರಿಗೆ ನ್ಯಾಮಿಷಾ ಎಂಬ ಮಗಳಿದ್ದಾಳೆ.

Revanth Reddy 2

ಮದುವೆಯ ನಂತರ ರೇವಂತ್ ರೆಡ್ಡಿ ಅವರ ರಾಜಕೀಯ ಪಯಣ ಆರಂಭವಾಯಿತು. ವಿದ್ಯಾರ್ಥಿ ದಿನಗಳಲ್ಲಿ ಅವರು ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನೊಂದಿಗೆ ಗುರುತಿಸಿಕೊಂಡಿದ್ದರು. 2006ರಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಿಡ್ಜಿಲ್ ಮಂಡಲದಿಂದ ಜಿಲ್ಲಾ ಪರಿಷತ್ ಪ್ರಾದೇಶಿಕ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು.

Revanth Reddy

ನಂತರ 2007 ರಲ್ಲಿ ಆಂಧ್ರಪ್ರದೇಶದ ವಿಧಾನ ಪರಿಷತ್ತಿನ ಸದಸ್ಯರಾದರು. ಈ ಅವಧಿಯಲ್ಲಿ ಅವರು ಎನ್ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷದ ಭಾಗವಾದರು. 2009 ರಲ್ಲಿ ರೇವಂತ್ ಟಿಡಿಪಿ ಟಿಕೆಟ್‌ನಲ್ಲಿ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು 6,989 ಮತಗಳಿಂದ ಗೆದ್ದರು. ಕೊಡಂಗಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ರೇವಂತ್ 5 ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಗುರುನಾಥರೆಡ್ಡಿ ಅವರನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ಶಾಸಕರಾದರು. ಇದನ್ನೂ ಓದಿ: ಡಾಲಿ ‘ಲಿಡ್ಕರ್’ಗೆ ರಾಯಭಾರಿ: ಸಿಎಂ ಅಧಿಕೃತ ಘೋಷಣೆ

revanth reddy 1

ತೆಲಂಗಾಣ ರಚನೆಗೂ ಮುನ್ನ 2014ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರೇವಂತ್ ಮತ್ತೊಮ್ಮೆ ಕೊಡಂಗಲ್‌ನಿಂದ ಟಿಡಿಪಿ ಅಭ್ಯರ್ಥಿಯಾದರು. ಟಿಆರ್‌ಎಸ್ ಅಭ್ಯರ್ಥಿಯಾಗಿದ್ದ ಗುರುನಾಥರೆಡ್ಡಿ ಅವರನ್ನು ಸೋಲಿಸಿದರು. 2014ರ ವಿಧಾನಸಭಾ ಚುನಾವಣೆಯಲ್ಲಿ ರೇವಂತ್ 14,614 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದಾದ ನಂತರ ಟಿಡಿಪಿ ರೇವಂತ್ ಅವರನ್ನು ತೆಲಂಗಾಣ ವಿಧಾನಸಭೆಯ ನಾಯಕನನ್ನಾಗಿ ಮಾಡಿತು. ಆದಾಗ್ಯೂ 2017ರ ಅಕ್ಟೋಬರ್ 25 ರಂದು ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಬಹಿರಂಗವಾದ ನಂತರ ಟಿಡಿಪಿ ರೇವಂತ್ ಅವರನ್ನು ಹುದ್ದೆಯಿಂದ ವಜಾಗೊಳಿಸಿತು. ಅಂತಿಮವಾಗಿ 2017ರ ಅಕ್ಟೋಬರ್ 31 ರಂದು ರೇವಂತ್ ಕಾಂಗ್ರೆಸ್ ಸದಸ್ಯರಾದರು.

2018ರ ಸೆಪ್ಟೆಂಬರ್ 20 ರಂದು ಅವರು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ 3 ಕಾರ್ಯಾಧ್ಯಕ್ಷರಲ್ಲಿ ಒಬ್ಬರಾಗಿ ನೇಮಕಗೊಂಡರು. 2018ರ ತೆಲಂಗಾಣ ವಿಧಾನಸಭೆಯಲ್ಲಿ, ರೇವಂತ್ 3ನೇ ಬಾರಿಗೆ ಕೊಡಂಗಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ರೇವಂತ್ ಬಿಆರ್‌ಎಸ್‌ನ ಪಟ್ನಂ ನರೇಂದ್ರ ರೆಡ್ಡಿ ಅವರ ಕೈಯಲ್ಲಿ ಮೊದಲ ಸೋಲು ಅನುಭವಿಸಿದರು.

ಅಸೆಂಬ್ಲಿ ಸೋಲಿನ ನಂತರ ರೇವಂತ್ 2019ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿದರು. 2019ರ ಚುನಾವಣೆಯಲ್ಲಿ ಗೆದ್ದ ತೆಲಂಗಾಣದ ಮೂವರು ಕಾಂಗ್ರೆಸ್ ಸಂಸದರಲ್ಲಿ ರೇವಂತ್ ಒಬ್ಬರು. ಮಲ್ಕಾಜ್‌ಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿಆರ್‌ಎಸ್‌ನ ಎಂ ರಾಜಶೇಖರ ರೆಡ್ಡಿ ಅವರನ್ನು 10,000ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ. 2021ರ ಜೂನ್‌ನಲ್ಲಿ ರೇವಂತ್ ಅವರನ್ನು ಕಾಂಗ್ರೆಸ್ ತನ್ನ ತೆಲಂಗಾಣ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದಾಗ ದೊಡ್ಡ ಜವಾಬ್ದಾರಿಯನ್ನು ಪಡೆದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರೇವಂತ್ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದಲ್ಲಿ ಈ ಸ್ಪರ್ಧೆ ಏರ್ಪಟ್ಟಿತ್ತು. ಇದನ್ನೂ ಓದಿ: ಚುನಾವಣೆಯಲ್ಲಿ ಸೋಲಿನ ಹೊಣೆ ಹೊತ್ತು ಕಮಲ್ ನಾಥ್ ರಾಜೀನಾಮೆ?

Share This Article