ಬೆಂಗಳೂರು: ಪತ್ನಿ ಚೆನ್ನಮ್ಮ (Chennamma) ಅವರನ್ನು ಕಳೆದುಕೊಂಡು ದುಃಖದಲ್ಲಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಅವರಿಗೆ ಸಾಂತ್ವನ ಹೇಳಿದ ನಾಡಿನ ಜನತೆ, ಕಾರ್ಯಕರ್ತರು, ಪಕ್ಷದ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಹೆಚ್‌ಡಿಡಿ ಕೃತಜ್ಞತಾ ಪತ್ರದಲ್ಲೇನಿದೆ?
ಎಪ್ಪತ್ತೆರಡು ವರ್ಷಗಳ ಸುದೀರ್ಘಕಾಲ ನನ್ನೊಂದಿಗೆ ಹೆಜ್ಜೆಗೆ ಹೆಜ್ಜೆ ಇರಿಸಿ ನಡೆದಿದ್ದ ನನ್ನ ಸಹಧರ್ಮಿಣಿ ಶ್ರೀಮತಿ ಚೆನ್ನಮ್ಮ ಅವರು 2026 ಜುಲೈ 18ರಂದು ಶನಿವಾರ ಶಿವೈಕ್ಯರಾದರು. ಮನೆಯ ನಂದಾದೀಪ ನಂದಿಹೋದ ಕಷ್ಟಕರ ಸಂದರ್ಭದಲ್ಲಿ ನಮ್ಮ ದುಃಖದಲ್ಲಿ ಭಾಗಿಯಾಗಿ ಸಾಂತ್ವನದ ಚೈತನ್ಯಧಾರೆ ಎರೆದ ಸಮಸ್ತರಿಗೂ ಕೈ ಜೋಡಿಸಿ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ.
ಹಿರಿಯರ ಆಣತಿಯಂತೆ ಪತಿ-ಪತ್ನಿಯರಾಗಿ ಸಪ್ತಪದಿ ತುಳಿದು ಬಾಳಬಂಡಿ ಏರಿದ್ದ ನಾವಿಬ್ಬರು ಸುಖ-ದುಃಖದಲ್ಲಿ ಸಮಭಾಗಿಗಳಾಗಿ ಸಪ್ತದಶಕಗಳ ಕಾಲ ಜೀವನ್ಮುಖಿಗಳಾಗಿ ತುಂಬು ಜೀವನ ನಡೆಸಿದ್ದೇವೆ. ಶಾಸಕನಾಗಿ, ಪ್ರತಿಪಕ್ಷ ನಾಯಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಕೊನೆಗೆ ಪ್ರಧಾನ ಮಂತ್ರಿಯಾಗಿ ರಾಷ್ಟ್ರಸೇವೆ ಮಾಡುವ ಮಹಾಭಾಗ್ಯ ಸಿಕ್ಕಿತು. ಕೀರ್ತಿ ಪ್ರಖ್ಯಾತಿ ಎಲ್ಲವೂ ನನಗಷ್ಟೇ ಸೇರಿತು. ಅದರ ಹಿಂದಿನ ಚೈತನ್ಯಶಕ್ತಿ ಚನ್ನಮ್ಮನವರೇ ಆಗಿದ್ದರು ಎಂದರೆ ಉತ್ರೇಕ್ಷೆ ಅಲ್ಲ. ಗಂಧದ ಕೊರಡು ತನ್ನನ್ನು ತಾನು ತೇಯ್ದುಕೊಂಡು ಪರಿಮಳ ಹೊರಸೂಸುವಂತೆ ಚನ್ನಮ್ಮನವರ ಎಣೆಯಿಲ್ಲದ ಮಮತೆ ಮತ್ತು ತ್ಯಾಗಶೀಲತೆ ನನ್ನ ಬಾಳಿಗೆ ಪರಿಪೂರ್ಣತೆ ತುಂಬಿತು. ಇದನ್ನೂ ಓದಿ: ನನ್ನ ಪತ್ನಿ ಅನ್ನಪೂರ್ಣೆ, ಆಕೆಯನ್ನು ರಂಗನಾಥನ ಪಾದಕ್ಕೆ ಕಳಿಸುತ್ತಿದ್ದೇನೆ – ಮಡದಿ ನೆನೆದು ಕಣ್ಣೀರಿಟ್ಟ ದೊಡ್ಡಗೌಡ್ರು

ರಾಜಕೀಯ ಹಿನ್ನೆಲೆಯೇ ಇಲ್ಲದ ನಮ್ಮ ಕುಟುಂಬದ ಸೊಸೆಯಾಗಿ ಬಂದ ಅವರು, ದೈವಭಕ್ತಿ, ಸಾತ್ವಿಕತೆ ಮತ್ತು ಸಾಂಪ್ರದಾಯಿಕ ನಡವಳಿಕೆಯ ಮೂಲಕ ನಮ್ಮ ಮನೆಯನ್ನು ನಂದಗೋಕುಲ ಮಾಡಿದರು. ನಿತ್ಯ ದಾಸೋಹಿಯಾಗಿ ಮನೆಯ ಅನ್ನಪೂರ್ಣೆಯಾದರು. ಮಾನವೀಯ ಮೌಲ್ಯಗಳ ಅನುಸರಣೆ ಹಾಗೂ ಶುದ್ಧ ಅಂತಃಕರಣದ ಮಾತೃಪ್ರೇಮದ ಮೂಲಕ ಎಲ್ಲರ ಪಾಲಿನ ಅಮ್ಮನಾದರು.
ಹೀಗೆ ನನ್ನ ಮನೆಯನ್ನು ಬೆಳಗಿ ಬೆಳೆಸಿದ ಶ್ರೀಮತಿ ಚೆನ್ನಮ್ಮನವರು ಶಿವನ ಪಾದ ಸೇರಿದ ಹೊತ್ತಿನಲ್ಲಿ ರಾಜ್ಯದ ಜನರು ತೋರಿದ ಅಂತಃಕರಣಪೂರ್ವಕ ಮಮತೆ, ಗೌರವಕ್ಕೆ ಪರಲೋಕದಲ್ಲಿರುವ ಅವರು, ಇಹದಲ್ಲಿರುವ ನಾನೂ ಧನ್ಯರಾಗಿದ್ದೇನೆ. ಅವರು ಕೊನೇ ಶ್ವಾಸ ಬಿಟ್ಟಾಗಿನಿಂದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ಪಾದದ ಬುಡದಲ್ಲಿ ಚಿರನಿದ್ರೆಗೆ ಜಾರುವ ಕ್ಷಣದವರೆಗೂ ಅವರ ಆತ್ಮಕ್ಕಾಗಿ ಮರುಗಿದ ಎಲ್ಲರಿಗೂ ಭಾವಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದನ್ನೂ ಓದಿ: ಆ್ಯಸಿಡ್ ದಾಳಿ ಆಗದೆ ಹೋಗಿದ್ರೆ ಅಮ್ಮನಿಗೆ ಇಷ್ಟು ಬೇಗ ಸಾವು ಬರ್ತಿರಲಿಲ್ಲ – ತಾಯಿ ನೆನೆದು ಬಿಕ್ಕಳಿಸಿ ಅತ್ತ ರೇವಣ್ಣ
ಮಾಜಿ ಪ್ರಧಾನಿಯ ಮಡದಿಯಾಗಿದ್ದರೂ ಬದುಕಿನ ಕಟ್ಟಕಡೆಯ ಕ್ಷಣದವರೆಗೂ ಸಾಮಾನ್ಯ ನಾರಿಯಾಗಿ ಬದುಕಿದ ಸಾತ್ವಿಕ ಜೀವಿ ನನ್ನ ಧರ್ಮಪತ್ನಿ, ತಮ್ಮ ವ್ಯಕ್ತಿತ್ವ, ಕರುಣೆ, ವಾತ್ಸಲ್ಯಕ್ಕೆ ರಾಜಕೀಯದ ಸೋಂಕು ಸೋಕದಂತೆ ಎಚ್ಚರ ವಹಿಸಿದ್ದ ಅವರು, ಮನುಷ್ಯ ಸಂಬಂಧಗಳಿಗೆ ಅತೀ ಹೆಚ್ಚು ಮಹತ್ವ ನೀಡುತ್ತಿದ್ದರು.
ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು, ಗೌರವಾನ್ವಿತ ಕೇಂದ್ರ ಸಚಿವರುಗಳು, ಮಾಜಿ ಮುಖ್ಯಮಂತ್ರಿಗಳು, ವಿವಿಧ ಮಠಗಳ ಪರಮಪೂಜ್ಯ ಪೀಠಾಧೀಶರು, ಮಂತ್ರಿಗಳು, ಮಾಜಿ ಮಂತ್ರಿಗಳು, ಶಾಸಕರು, ಮಾಜಿ ಶಾಸಕರು, ಮಾಧ್ಯಮ ಬಂಧುಗಳು, ಪೊಲೀಸ್ ಇಲಾಖೆ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕಲೆ, ಸಾಹಿತ್ಯ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ರಾಜ್ಯದ ಸರ್ವ ಭಾಗಗಳಿಂದ ಹರಿದುಬಂದ ಜನಸಾಗರ ನನ್ನ ಆರ್ಧಾಂಗಿಯ ಆತ್ಮಕ್ಕೆ ಚಿರಶಾಂತಿಯನ್ನು ಕೋರಿತು. ಇದಕ್ಕೆ ಪ್ರತಿಯಾಗಿ ‘ಕೃತಜ್ಞತೆ ಸಲ್ಲಿಸುವೆ’ ಎನ್ನುವುದು ಬಹಳ ಚಿಕ್ಕ ಮಾತಾಗುತ್ತದೆ. ಅದಕ್ಕೂ ಮೀರಿ ನಾನು ವಿನೀತನಾಗಿ ಎಲ್ಲರಿಗೂ ನಮಿಸುತ್ತೇನೆ.
ವಿಶೇಷವಾಗಿ ನಾನು ಜನ್ಮವೆತ್ತಿದ ಹಾಸನ ಜಿಲ್ಲೆಯ ಮಹಾಜನರು ತಮ್ಮಗಳ ಅಕ್ಕರೆಯ ಅಮ್ಮ ಚನ್ನಮ್ಮನವರ ಬಗ್ಗೆ ತೋರಿದ ಅಭಿಮಾನ, ವಾತ್ಸಲ್ಯಕ್ಕೆ ನಾನು ಮೂಕನಾಗಿದ್ದೇನೆ. ಮತ್ತೊಮ್ಮೆ ನನ್ನ ಕುಟುಂಬದ ಜತೆ ನಿಂತು ಧೈರ್ಯ ತುಂಬಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕವಾಗಿ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಎಂದು ಹೆಚ್.ಡಿ.ದೇವೇಗೌಡ ಕೃತಜ್ಞತೆ ತಿಳಿಸಿದ್ದಾರೆ.
