ಬೆಂಗಳೂರು/ಮಂಡ್ಯ: ರಾಜ್ಯ ರಾಜಕಾರಣದ ಧೀಮಂತ ನಾಯಕ, ಕರುನಾಡು ಕಂಡ ಅದಮ್ಯ ಚೇತನ, ಸೌಮ್ಯ ಸ್ವಭಾವದ ಅಜಾತಶತ್ರು, ದೂರದೃಷ್ಟಿಯ ಕನಸುಗಾರ, ಕಲಾಪ್ರೇಮಿ, ಮಾಜಿ ಸಿಎಂ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ (SM Krishna) ತಮ್ಮ ಬದುಕಿನ ಪಯಣ ಮುಗಿಸಿದ್ದು ಇಂದು ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರು ಸೋಮನಹಳ್ಳಿಯಲ್ಲಿ (Somanahalli) ನಡೆಯಲಿದೆ.
ಬೆಳಗ್ಗೆ 8 ಗಂಟೆಗೆ ಕೃಷ್ಣ ಪಾರ್ಥಿವ ಶರೀರವನ್ನು ಮದ್ದೂರಿಗೆ ಕೊಂಡೊಯ್ಯಲಾಗುತ್ತದೆ. ಮಾರ್ಗಮಧ್ಯೆ ಕೆಂಗೇರಿ, ರಾಮನಗರ, ಚನ್ನಪಟ್ಟಣದಲ್ಲಿ ಕೆಲಹೊತ್ತು ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಸಂಜೆ 3 ಗಂಟೆ ಸುಮಾರಿಗೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಲಿದೆ. ಸಿಎಂ ಸಿದ್ದರಾಮಯ್ಯ, ಸಚಿವರು, ಕೇಂದ್ರದ ಪರವಾಗಿ ಪ್ರಹ್ಲಾದ್ ಜೋಶಿ, ಕುಮಾರಸ್ವಾಮಿ ಸೇರಿ ರಾಜಕೀಯ ಗಣ್ಯರು, ಸ್ವಾಮೀಜಿಗಳು, ಅಪಾರ ಅಭಿಮಾನಿಗಳು ಭಾಗವಹಿಸಲಿದ್ದಾರೆ. ಇಂದು ಅಗತ್ಯ ತಯಾರಿಗಳು ನಡೆದಿವೆ. ಡಿಸಿಎಂ ಶಿವಕುಮಾರ್ ಸೇರಿ ಪ್ರಮುಖರು ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಶಾಸಕನಿಂದ ಮುಖ್ಯಮಂತ್ರಿವರೆಗೆ…. ಎಸ್‌ಎಂಕೆ ರಾಜಕೀಯ ಜೀವನದ ಏಳುಬೀಳು!
3 ಗಂಟೆಯವರೆಗೆ ಅಂತಿಮ ದರ್ಶನ:
ಸೋಮನಹಳ್ಳಿಗೆ 10 ಗಂಟೆ ಬರಲಿರುವ ಕೃಷ್ಣರ ಪಾರ್ಥಿವ ಶರೀರವನ್ನು ಕಾಫಿ ಡೇ (Cafe Coffee Day) ಆವರಣದಲ್ಲಿ ಇಡಲಾಗುತ್ತದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಒಕ್ಕಲಿಗ ಸಂಪ್ರದಾಯದಂತೆ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ 15 ಕ್ಕೂ ಹೆಚ್ಚು ವೈದಿಕರಿಂದ ವಿಧಿ ವಿಧಾನ ಕಾರ್ಯಗಳು ನಡೆಯಲಿದೆ. ಗಂಧದ ಕಟ್ಟಿಗೆಳಿಂದ ಮೃತ ದೇಹವನ್ನು ಸುಡುವ ಮೂಲಕ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.
ಮೃತದೇಹ ಇಡಲಾಗುವ ಜಾಗದಲ್ಲಿ ಜರ್ಮನ್ ಟೆಂಟ್ ಹಾಕಲಾಗಿದ್ದು ಬ್ಯಾರೀಕೇಡ್ ಅಳವಡಿಕೆ ಮಾಡಲಾಗಿದೆ. ಮೂರು ಸರತಿ ಮೂಲಕ ದರ್ಶನಕ್ಕೆ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ. ವಿಐಪಿಗಳಿಗೆ ಜಿಲ್ಲಾಡಳಿತ ವಿಶೇಷ ಗ್ಯಾಲರಿ ನಿರ್ಮಾಣ ಮಾಡಿದೆ. ಎಸ್.ಎಂ.ಕೃಷ್ಣರ ಕುಟುಂಬಸ್ಥರಿಗೆ ಕಾಫಿ ಡೇ ಕಟ್ಟಡದ ಪಕ್ಕದಲ್ಲೇ ಆಸನದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಯಿಂದ ಅಂತ್ಯಕ್ರಿಯೆ ಪ್ರಕ್ರಿಯೆ ಆರಂಭವಾಗಲಿದ್ದು 5 ಗಂಟೆ ಒಳಗೆ ಮುಕ್ತಾಯವಾಗಲಿದೆ.