– ರೌಡಿಶೀಟರ್ ಸೇರಿ ಮೂವರು ಆರೋಪಿಗಳು ಅರೆಸ್ಟ್
ರಾಮನಗರ: ಅರಣ್ಯ ಪ್ರದೇಶದಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ರೌಡಿಶೀಟರ್ ಸೇರಿ ಪುಂಡರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಕನಕಪುರ (Kanakapura) ತಾಲೂಕಿನ ಕುರುಬಳ್ಳಿದೊಡ್ಡಿ ಗ್ರಾಮದ ಬಳಿ ನಡೆದಿದೆ.
ಆರೋಪಿಗಳನ್ನು ರೌಡಿಶೀಟರ್ ಕಿರಣ್, ಗುರುಪ್ರಸಾದ್, ಸುಂದರ್ ಎಂದು ಗುರುತಿಸಲಾಗಿದ್ದು, ಈ ಮೂವರನ್ನು ಸಾತನೂರು ಪೊಲೀಸರು ಬಂಧಿಸಿದ್ದಾರೆ.ಇದನ್ನೂ ಓದಿ: ಬಾಯಿ ಸುಡಲಿದೆ ಕಾಫಿ – ತಿಂಗಳಾಂತ್ಯಕ್ಕೆ ಕಪ್ ಕಾಫಿ ಬೆಲೆ 3 ರೂ. ಏರಿಕೆ ಸಾಧ್ಯತೆ
ಸೋಮವಾರ ರಾತ್ರಿ ಗ್ರಾಮದ ಐವರು ಯುವಕರು ಕಬ್ಬಾಳು ಅರಣ್ಯ ವ್ಯಾಪ್ತಿಯಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಯುವಕರನ್ನ ಪ್ರಶ್ನೆ ಮಾಡಿದ್ದಕ್ಕೆ ಗಲಾಟೆ ಆರಂಭವಾಗಿದೆ.
ಗಲಾಟೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದು, ಅರಣ್ಯ ಇಲಾಖೆ ವಾಹನಕ್ಕೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ. ಕೂಡಲೇ 112 ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಜಗಳ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಯುವಕರು ಪೊಲೀಸರ ಮೇಲೆಯೂ ಹಲ್ಲೆ ಮಾಡಿ, ಪೊಲೀಸರ ಟ್ಯಾಬ್ ಒಡೆದು ಹಾಕಿದ್ದಾರೆ. ಬಳಿಕ ಸ್ಥಳಕ್ಕೆ ಸಾತನೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸದ್ಯ ಮೂವರು ಆರೋಪಿಗಳನ್ನು ಸಾತನೂರು ಪೊಲೀಸರು ಬಂಧಿಸಿದ್ದು, ಪರಾರಿಯಾಗಿದ್ದ ಇನ್ನಿಬ್ಬರ ಪತ್ತೆಗಾಗಿ ಶೋಧ ನಡೆಸಿದ್ದಾರೆ. ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಕೇರಳದ ಅನಂತ ಪದ್ಮನಾಭ ದೇವಸ್ಥಾನಕ್ಕೆ ಭೇಟಿ ನೀಡಿದ ತಾರಾ