ನವದೆಹಲಿ: ಪಾದಚಾರಿ ಮಾರ್ಗಗಳನ್ನು (Footpath) ಸಾರ್ವಜನಿಕರು ನಡೆದುಹೋಗಲು ಮಾತ್ರ ನಿರ್ಮಿಸಲಾಗಿದ್ದು, ಅವುಗಳನ್ನು ಯಾವುದೇ ರೀತಿಯಲ್ಲಿ ಅತಿಕ್ರಮಿಸಲು ಅವಕಾಶವಿಲ್ಲ ಎಂದು ದೆಹಲಿ ಹೈಕೋರ್ಟ್ (Delhi High Court) ಅಭಿಪ್ರಾಯ ವ್ಯಕ್ತಪಡಿಸಿದೆ.
ದೆಹಲಿಯ ಬಸ್ತಿ (ಗುಡಿಸಲು) ನಿವಾಸಿಗಳ ಗುಂಪಾದ ಲೋಹರ್ ಬಸ್ತಿ ಲಾಲ್ ಬಾಗ್ ಆಜಾದ್‌ಪುರ್ ವಿಕಾಸ್ ಸಮಿತಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರಿದ್ದ ಪೀಠ ಇತ್ತೀಚೆಗೆ ವಿಚಾರಣೆ ನಡೆಸಿದ್ದರು. ಸಾರ್ವಜನಿಕ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ನಿರ್ಮಿಸಲಾಗಿದೆ ಎಂದು ಗುರುತಿಸಲಾದ ಕೆಲವು ಜೋಪಡಿಗಳ (Basti) (ಗುಡಿಸಲು ಅಥವಾ ಬಸ್ತಿ) ತೆರವು ಕಾರ್ಯಾಚರಣೆಗೆ ತಡೆ ನೀಡಲು ನಿರಾಕರಿಸಿದ ಕೋರ್ಟ್, ಈ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಜೋಪಡಿಗಳನ್ನ ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದ ಡೆಮಾಲಿಷನ್ ನೋಟಿಸ್ ಅನ್ನು ಪ್ರಶ್ನಿಸಿ ವಿಕಾಸ್ ಸಮಿತಿ ನ್ಯಾಯಾಲಯದ ಮೊರೆ ಹೋಗಿತ್ತು. ಆದ್ರೆ, ಅರ್ಜಿದಾರರು ಪಾದಚಾರಿ ಮಾರ್ಗದ ಮೇಲೆ ಬಸ್ತಿಗಳು/ಜೋಪಡಿಗಳನ್ನ ನಿರ್ಮಿಸಿರುವುದನ್ನು ಕೋರ್ಟ್ ಗಮನಿಸಿತ್ತು. ತಕ್ಷಣದ ಪರಿಹಾರ ನೀಡಲು ನಿರಾಕರಿಸಿತಲ್ಲದೇ, ಫುಟ್‌ಪಾತ್ ರಸ್ತೆಯು ಪಾದಚಾರಿಗಳಿಗಷ್ಟೇ ಸೀಮಿತ ಎಂದು ಹೇಳಿತು.

ಪಾದಚಾರಿ ಮಾರ್ಗಗಳನ್ನು ಜನರು ನಡೆದಾಡಲು, ಅಂದರೆ ವಾಹನ ಸಂಚಾರದಿಂದ ದೂರವಾಗಿ ಪಾದಚಾರಿಗಳ ಸುರಕ್ಷಿತ ಸಂಚಾರಕ್ಕಾಗಿ ನಿರ್ಮಿಸಲಾಗುತ್ತದೆ. ಪಾದಚಾರಿ ರಸ್ತೆಗಳನ್ನ ಅತಿಕ್ರಮಿಸಲು ಸಾಧ್ಯವಿಲ್ಲ. ಈ ಕಾರಣಗಳಿಂದ ಅರ್ಜಿಯನ್ನ ಪರಿಗಣಿಸಲು ಸಾಧ್ಯವಿಲ್ಲ ಎಂದಿತು ಕೋರ್ಟ್.
ಆಗಸ್ಟ್ 7ರಂದು ಲೋಕೋಪಯೋಗಿ ಇಲಾಖೆ (PWD) ಹೊರಡಿಸಿದ್ದ ತೆರವು ನೋಟಿಸ್ ಅನ್ನು ರದ್ದುಪಡಿಸುವಂತೆ ಅರ್ಜಿದಾರರು ಮನವಿ ಮಾಡಿದ್ದರು. ಜೋಪಡಿ ನಿವಾಸಿಗಳು ಸರ್ಕಾರಿ ಜಾಗವನ್ನು ಅಕ್ರಮವಾಗಿ ಅತಿಕ್ರಮಿಸಿ ಜೋಪಡಿಗಳನ್ನ ನಿರ್ಮಿಸಿದ್ದಲ್ಲದೇ, ವಿವಿಧ ವ್ಯಾಪಾರ ಚಟುವಟಿಕೆಗಳನ್ನೂ ನಡೆಸುತ್ತಿದ್ದಾರೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಅದೇ ವೇಳೆ, ಬಸ್ತಿಯಲ್ಲಿ ವಾಸಿಸುತ್ತಿರುವ ನಿವಾಸಿಗಳ ಸಮೀಕ್ಷೆ ನಡೆಸಿ, ಪುನರ್ವಸತಿಗೆ ಯಾರು ಅರ್ಹರು ಎಂಬುದನ್ನು ನಿರ್ಧರಿಸುವಂತೆ ಅರ್ಜಿದಾರರು ಕೋರಿದ್ದರು. ಪುನರ್ವಸತಿ ಕ್ರಮಗಳನ್ನ ಕೈಗೊಳ್ಳುವವರೆಗೆ ತೆರವು ನೋಟಿಸ್ ಜಾರಿಯನ್ನ ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಮಧ್ಯಂತರ ನಿರ್ದೇಶನ ನೀಡಬೇಕೆಂದೂ ಮನವಿ ಮಾಡಿದ್ದರು. ಆದರೆ, ತೆರವು ನೋಟಿಸ್ ಅನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿತು. ಆದಾಗ್ಯೂ, ಪುನರ್ವಸತಿ ಕುರಿತಂತೆ ಅರ್ಜಿದಾರರು ಸಲ್ಲಿಸಿರುವ ಮನವಿಯನ್ನ 4 ವಾರಗಳೊಳಗೆ ಪರಿಗಣಿಸಿ ನಿರ್ಧಾರ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಇದರ ಹೊರತಾಗಿ ಯಾವುದೇ ಪರಿಹಾರ ಅಥವಾ ಇತರೆ ಆದೇಶ ಪಡೆಯಲು ಅರ್ಜಿದಾರರು ಅರ್ಹರಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
