ದುಬೈ: ಫ್ಲೈದುಬೈ (flydubai) ವಿಮಾನದಲ್ಲಿ ಸಹ-ಪೈಲಟ್ನಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ (Smit Machchhar) ಅವರ ತಲೆಬುರುಡೆಗೆ ಗಂಭೀರ ಪೆಟ್ಟಾಗಿದ್ದು, ಸೌದಿಯಲ್ಲಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ.
ಕಾಕ್ಪಿಟ್ನಲ್ಲಿದ್ದಾಗ ಒಮಾನಿ ಸಹ-ಪೈಲಟ್ ನಡೆಸಿದ ‘ಕ್ರಾಶ್ ಆಕ್ಸ್’ (ವಿಮಾನದ ತುರ್ತು ಬಳಕೆಯ ಕೊಡಲಿ) ದಾಳಿಯಿಂದಾಗಿ ಸ್ಮಿತ್ ತಲೆಬುರುಡೆಯ ಮೂಳೆ ಮುರಿತಕ್ಕೆ (skull fracture) ಒಳಗಾಗಿದೆ.
38 ವರ್ಷದ ವಿಮಾನದ ಕ್ಯಾಪ್ಟನ್, ತೀವ್ರ ನೋವು ಮತ್ತು ವಿಪರೀತ ರಕ್ತಸ್ರಾವದ ನಡುವೆಯೂ ಹೋರಾಡಿ ಕಾಕ್ಪಿಟ್ನ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಸಿಬ್ಬಂದಿ ಮತ್ತು ಪ್ರಯಾಣಿಕರು ಒಳಗೆ ನುಗ್ಗಿ, ಸಹ-ಪೈಲಟ್ನನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ವಿಮಾನವನ್ನು ಸ್ಥಿರಗೊಳಿಸಲು ನೆರವಾಗಲು ಸಾಧ್ಯವಾಯಿತು. ನಂತರ, ಈ ವಿಮಾನವು ಸೌದಿ ಅರೇಬಿಯಾದ ತಬುಕ್ನಲ್ಲಿರುವ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲಜೀಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಇದನ್ನೂ ಓದಿ: ಪೈಲಟ್ ಸ್ಮಿತ್ ಮಚ್ಚರ್ಗೆ ಇಸ್ರೇಲ್ನಿಂದ ಅತ್ಯುನ್ನತ ಗೌರವ – ಸ್ವಾತಂತ್ರ್ಯ ದಿನಾಚರಣೆಗೆ ನೆತನ್ಯಾಹು ಆಹ್ವಾನ
ದಾಳಿಯ ವೇಳೆ ಮಚ್ಚಾರ್ ಅವರ ತಲೆಬುರುಡೆಯ ಒಂದು ಭಾಗವು ಒಳಗೆ ಮುರಿತಕ್ಕೆ (depressed fracture) ಒಳಗಾಗಿದೆ. ಅವರನ್ನು ಯುಎಇಗೆ ಕರೆದೊಯ್ಯುವ ಮುನ್ನ ಸೌದಿ ಅರೇಬಿಯಾದಲ್ಲಿ ತುರ್ತು ಚಿಕಿತ್ಸೆ ನೀಡಿ, ಅಲ್ಲಿನ ವೈದ್ಯರು ಅವರ ತಲೆಬುರುಡೆಗೆ ಚಿಕಿತ್ಸೆ ನೀಡಿದ್ದರು ಎನ್ನಲಾಗಿದೆ.
ಪೈಲಟ್ ಸ್ಮಿತ್ಗೆ ‘ಡಿಪ್ರೆಸ್ಡ್ ಸ್ಕಲ್ ಫ್ರಾಕ್ಚರ್’ (ಬುರುಡೆಯ ಒಳಮುಖ ಮುರಿತ) ಉಂಟಾಗಿದೆ. ಇದು ಗಂಭೀರವಾದ ಗಾಯವಾಗಿದೆ. ಏಕೆಂದರೆ ಮೂಳೆಯು ಮೆದುಳಿನ ಮೇಲೆ ಒತ್ತಡ ಹೇರಬಹುದು ಅಥವಾ ಅದಕ್ಕೆ ಹಾನಿ ಉಂಟುಮಾಡಬಹುದು. ಹೀಗಾಗಿ, ಇದಕ್ಕೆ ಸಾಮಾನ್ಯವಾಗಿ ವೈದ್ಯಕೀಯ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನೀವು ಯುಎಇ ಹೀರೋ – ಸ್ಮಿತ್ ಮಚ್ಚರ್ ಭೇಟಿಯಾಗಿ ಸಿಹಿಮುತ್ತು ಕೊಟ್ಟ ದುಬೈ ಯುವರಾಜ
ಪೈಲಟ್ ತಮ್ಮ ಕೈಕಾಲುಗಳು, ಎದೆ ಮತ್ತು ಹೊಟ್ಟೆಯ ಮೇಲ್ಭಾಗದಲ್ಲಿ ಹಲವು ಗಾಯಗಳಿಗೆ ಒಳಗಾಗಿದ್ದರು. ಸದ್ಯ ಸ್ಮಿತ್ ಮಚ್ಚಾರ್ ಚೇತರಿಸಿಕೊಳ್ಳುತ್ತಿದ್ದಾರೆ. ಸುಧಾರಿತ ವೈದ್ಯಕೀಯ ಚಿಕಿತ್ಸೆಗಾಗಿ ಕಳೆದ ವಾರ ಕ್ಯಾಪ್ಟನ್ ಸ್ಮಿತ್ ಅವರನ್ನು ಸೌದಿ ಅರೇಬಿಯಾದಿಂದ ಅಬುಧಾಬಿಗೆ ವಿಮಾನದ ಮೂಲಕ ಸ್ಥಳಾಂತರಿಸಲಾಯಿತು. ಅವರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ತಜ್ಞ ವೈದ್ಯರ ತಂಡವೊಂದು ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ. ಪೈಲಟ್ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

