ಮಂಡ್ಯ: ಜಿಲ್ಲೆಯಲ್ಲಿ ಪುಡಿ ರೌಡಿಗಳ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯುಂಟಾಗಿದೆ. ವಾರದ ಅಂತರದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ (Bengaluru -Mysuru Expressway) ನಡೆದಿರುವ ಮೂರನೇ ಪ್ರಕರಣ ಇದಾಗಿದ್ದು, ಮೆಡಿಸನ್ ಟ್ರಕ್ ಹಾಗೂ ಕಾರಿನ ಮೇಲಿನ ದಾಳಿಯ ಬೆನ್ನಲ್ಲೇ ಇದೀಗ ಕೆಎಸ್‌ಆರ್‌ಟಿಸಿಯ ಪ್ರತಿಷ್ಠಿತ ಫ್ಲೈ ಬಸ್ (Fly Bus) ಚಾಲಕ ಮತ್ತು ನಿರ್ವಾಹಕನ ಮೇಲೆ ಪುಂಡರು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಂದು ಮಧ್ಯರಾತ್ರಿ ನಡೆದಿದ್ದೇನು?
ಕಳೆದ ಎರಡು ದಿನಗಳ ಹಿಂದೆ ಮಧ್ಯರಾತ್ರಿ ಸುಮಾರು 2:30ರ ಅವಧಿಯಲ್ಲಿ ಈ ಘಟನೆ ಸಂಭವಿಸಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಂಪೇಗೌಡ ಏರ್‌ಪೋರ್ಟ್) ಮೈಸೂರಿಗೆ ತೆರಳುತ್ತಿದ್ದ ಫ್ಲೈ ಬಸ್, ಮಂಡ್ಯ ನಗರದಲ್ಲಿ ಪ್ರಯಾಣಿಕರನ್ನು ಇಳಿಸಿ ಹೆದ್ದಾರಿಯ ಸರ್ವಿಸ್ ರಸ್ತೆಯ ಮೂಲಕ ಚಲಿಸುತ್ತಿತ್ತು. ಈ ವೇಳೆ ಕುಡಿದ ನಶೆಯಲ್ಲಿದ್ದ ಸ್ಥಳೀಯ ಪುಂಡರು, ನಿಯಮ ಉಲ್ಲಂಘಿಸಿ ಒನ್-ವೇಯಲ್ಲಿ ವಾಹನ ಚಲಾಯಿಸಿಕೊಂಡು ಬಂದು ಫ್ಲೈ ಬಸ್‌ಗೆ ಅಡ್ಡಗಟ್ಟಿದ್ದಾರೆ. ಇದನ್ನೂ ಓದಿ: ಹಾರ್ಮುಜ್ ದಾಳಿಗೆ ಪ್ರತೀಕಾರ: ಇರಾನ್‌ನ 80ಕ್ಕೂ ಹೆಚ್ಚು ತಾಣಗಳ ಮೇಲೆ ಅಮೆರಿಕ ಭೀಕರ ಏರ್‌ಸ್ಟ್ರೈಕ್
ಈ ವೇಳೆ ಬಸ್ ಚಾಲಕ ವಿನೋದ್ ಹಾಗೂ ನಿರ್ವಾಹಕ ಈರಣ್ಣ ಪ್ರಶ್ನಿಸಿದಾಗ, ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾರೆ. ನಾನು ಮಂಡ್ಯ ಲೋಕಲ್ ಎಂದು ಕೂಗಾಡಿದ ಪುಂಡರು, ಪೊಲೀಸರಿಗೆ ದೂರು ನೀಡುತ್ತೇವೆ ಎಂದರೂ ಹೆದರದೆ, ಖಾಕಿ ಪಡೆಗೂ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಬಳಿಕ ಚಾಲಕ ಮತ್ತು ನಿರ್ವಾಹಕನ ಮೇಲೆ ತೀವ್ರ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಮಳೆಯಬ್ಬರ – ಹೇಮಾವತಿ ಜಲಾಶಯದ ಒಳಹರಿವು ಹೆಚ್ಚಳ

ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್:
ಘಟನೆಯ ದೃಶ್ಯಾವಳಿಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್ ಜಲಾಶಯದ ಒಳಹರಿವಿನಲ್ಲಿ ಗಣನೀಯ ಏರಿಕೆ
ಹೆದ್ದಾರಿಯಲ್ಲಿ ಸರಣಿ ಅಪರಾಧಗಳು: ಭೀತಿಯಲ್ಲಿ ಪ್ರಯಾಣಿಕರು
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಹಾಗೂ ಸರ್ವಿಸ್ ರಸ್ತೆಗಳು ಇತ್ತೀಚೆಗೆ ಪುಂಡರ ಆಟದ ಮೈದಾನವಾಗಿ ಮಾರ್ಪಡುತ್ತಿರುವುದು ಸ್ಪಷ್ಟವಾಗಿದೆ. ಇದಕ್ಕೆ ಒಂದೇ ವಾರದಲ್ಲಿ ನಡೆದಿರುವ ಮೂರು ಪ್ರಕರಣಗಳು ಸಾಕ್ಷಿ.
ಮೊದಲ ಪ್ರಕರಣ: ಮಂಡ್ಯ ಬಳಿ ಮೆಡಿಸನ್ ಟ್ರಕ್ ಮೇಲೆ ಫೈರಿಂಗ್ ನಡೆದಿತ್ತು.
ಎರಡನೇ ಪ್ರಕರಣ: ಮದ್ದೂರು ಬಳಿ ಕಾರನ್ನು ಅಡ್ಡಗಟ್ಟಿ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಲಾಗಿತ್ತು.
ಮೂರನೇ ಪ್ರಕರಣ: ಇದೀಗ ಮಂಡ್ಯದಲ್ಲಿ ಫ್ಲೈ ಬಸ್ ಸಿಬ್ಬಂದಿ ಮೇಲಿನ ಹಲ್ಲೆ.
ಒಟ್ಟಿನಲ್ಲಿ ಮಂಡ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಪೊಲೀಸರು ಇಂತಹ ಪುಡಿ ರೌಡಿಗಳಿಗೆ ತಕ್ಕ ಶಾಸ್ತಿ ಮಾಡಿ, ಹೆದ್ದಾರಿ ಪ್ರಯಾಣಿಕರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಮೇವು ತರಲು ಹೋಗಿದ್ದ 70 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರವೆಸಗಿ ಕೊಲೆ
