ಕೌಲಾಲಂಪುರ್: ಮಲೇಷ್ಯಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ದೇಶದ ಏಳು ರಾಜ್ಯಗಳಲ್ಲಿ ಪ್ರವಾಹ ಉಂಟಾಗಿದೆ. ಈ ಕಾರಣದಿಂದ ಸಾವಿರಾರು ಮಂದಿ ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಕಳೆದವಾರ ದೇಶದಲ್ಲಿ ವಾರಗಳವರೆಗೆ ನಿರಂತರ ಮಳೆ ಮುಂದುವರಿಯಲಿದೆ ಎಂದು ತಿಳಿಸಿತ್ತು. ಐದು ರಾಜ್ಯಗಳಲ್ಲಿ ನದಿಗಳು ಹರಿಯುವ ಪ್ರದೇಶಗಳಲ್ಲಿ ಜನರು ಭಾರೀ ಎಚ್ಚರ ವಹಿಸಬೇಕು ಎಂದು ಸರ್ಕಾರ ತಿಳಿಸಿತ್ತು.
ಡಿಸೆಂಬರ್ ಮಧ್ಯ ಭಾಗದಿಂದ ಸುಮಾರು 1.25 ಲಕ್ಷ ಜನರನ್ನು ಸ್ಥಳಾಂತರಗೊಳಿಸಲಾಗಿತ್ತು. ಆದರೂ ಇಲ್ಲಿಯವರೆಗೆ ಪ್ರವಾಹದಿಂದಾಗಿ 50 ಜನರು ಸಾವನ್ನಪ್ಪಿದ್ದಾರೆ. ಹಾಗೂ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರೈತರು ನನಗಾಗಿ ಸತ್ತರೇ ಅಂತ ಮೋದಿ ಹೇಳಿದ್ರು – ಮೇಘಾಲಯ ರಾಜ್ಯಪಾಲ ವಾಗ್ದಾಳಿ
ಆಗ್ನೇಯ ಏಷ್ಯಾ ರಾಷ್ಟ್ರದಲ್ಲಿ ವರ್ಷಾಂತ್ಯದಲ್ಲಿ ಪ್ರವಾಹ ಉಂಟಾಗುವುದು ಸಾಮಾನ್ಯವಾಗಿದೆ. ಪ್ರತಿ ಸಲದಂತೆ ಈ ಬಾರಿಯೂ ಜನರನ್ನು ಸಾಮೂಹಿಕವಾಗಿ ಸ್ಥಳಾಂತರಿಸುವ ಪ್ರಕ್ರಿಯೆ ನಡೆದಿದೆ. ಆದರೆ ಡಿಸೆಂಬರ್ 17ರಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ನದಿಗಳೂ ಉಕ್ಕಿ ಹರಿಯುತ್ತಿದೆ. ಇದರಿಂದ ಜನರು ಕಂಗೆಟ್ಟಿದ್ದು, ಪಲಾಯನಗೈಯುತ್ತಿದ್ದಾರೆ. ನಗರಗಳೇ ಮುಳುಗುವ ಭೀತಿಯಲ್ಲಿ ಜನರು ಬದುಕುತ್ತಿದ್ದಾರೆ. ಇದನ್ನೂ ಓದಿ: ರಾಜಕೀಯ ಬಿಕ್ಕಟ್ಟು – ಸುಡಾನ್ ಪ್ರಧಾನಿ ರಾಜೀನಾಮೆ ಘೋಷಣೆ