ಮಡಿಕೇರಿ: ಆ ಊರಿನಲ್ಲಿ ಬಹುತೇಕ ಜನರು ಕೂಲಿ ಕಾರ್ಮಿಕರೇ. ದಿನ ನಿತ್ಯ ಕೆಲಸ ಮಾಡಿ ದುಡಿದ ಹಣದಲ್ಲಿ ಮದ್ಯಪಾನ (Drinking Alcohol) ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಕಳೆದ 1 ವಾರದಲ್ಲಿ ಮದ್ಯಪಾನ ಮಾಡಿ ಐವರು ಮೃತಪಟ್ಟಿದ್ದು ಊರಿನ ಜನರು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ.
Advertisement
ಈ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯದ ಮುಂಭಾಗದ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಡಿಮೆ ಬೆಲೆಯ ಮದ್ಯವನ್ನು ತಂದು ಇಲ್ಲಿರುವ ಕೂಲಿ ಕಾರ್ಮಿಕರಿಗೆ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಹಾಸನ ಜಿಲ್ಲೆಯಿಂದ ಕಡಿಮೆ ಬೆಲೆಗೆ ಮದ್ಯವನ್ನು ತಂದು ಈ ಊರಿನ ಕೆಲವು ಮನೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಬಾರ್‌ಗಳಲ್ಲಿ ಮದ್ಯ ಮಾರಾಟ ಮಾಡಲು ಸಮಯ ನಿಗದಿ ಇರುತ್ತದೆ. ಆದರೆ ಈ ಗ್ರಾಮದಲ್ಲಿ ಹಗಲು ರಾತ್ರಿ ಎನ್ನದೇ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
Advertisement
Advertisement
ಇದೀಗ ಒಂದೇ ವಾರದಲ್ಲಿ ಐವರು ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಲ್ಲಿನ ದೇವಾಲಯ ಮುಂಭಾಗದ ಹಲವು ಮನೆಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಹಾರಂಗಿ ಪೋಲಿಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಮದ್ಯ ಮಾರಾಟ ಮಾಡುವ ಮನೆಗಳ ಮೇಲೆ ದಾಳಿ ನಡೆಸಿ ಮದ್ಯ ಮಾರಾಟ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಅನಧಿಕೃತವಾಗಿ ಮಾರಾಟ ಮಾಡಲು ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಗ್ರಾಮದಲ್ಲಿ ಈಗಲೂ ಅನೇಕ ಮನೆಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲು ಕೆಲ ಜನರು ಮುಂದಾಗಿದ್ದಾರೆ. ಕೂಲಿ ಕಾರ್ಮಿಕರು ತಮ್ಮ ಮನೆಗಳ ಸಮೀಪವೇ ಮದ್ಯ ಸಿಗುವುದರಿಂದ ಯಾವ ಬ್ರ್ಯಾಂಡ್ ಎಂಬುವುದನ್ನು ನೋಡದೇ ಕಡಿಮೆ ಬೆಲೆಯ ಮದ್ಯ ಸೇವಿಸಿ ಸಾವನ್ನಪ್ಪುತ್ತಿದ್ದಾರೆ. ಇದನ್ನೂ ಓದಿ: ತಾಯಿಗೆ ದ್ರೋಹ ಮಾಡಿದ ಬಾಬುರಾವ್ ಚಿಂಚನಸೂರು – ಗಿರೀಶ್ ಮಟ್ಟಣ್ಣನವರ್
Advertisement
ಇದೀಗ ಮದ್ಯ ಸೇವಿಸಿ ಐವರು ಸಾವನ್ನಪ್ಪಿರುವುದಕ್ಕೆ ಸಂಬಂಧಪಟ್ಟ ಇಲಾಖೆಯವರು ಭೇಟಿ ನೀಡಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಒಂದೇ ವಾರದಲ್ಲಿ ಕಡಿಮೆ ಬೆಲೆಯ ಮದ್ಯ ಸೇವಿಸಿ ಕೂಲಿ ಕಾರ್ಮಿಕರು ಬಲಿಯಾಗಿರುವುದಕ್ಕೆ ಇನ್ನಾದರೂ ಇಲಾಖೆಯವರು ಗ್ರಾಮಕ್ಕೆ ತೆರಳಿ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: H3N2 ಇನ್‌ಫ್ಲುಯೆಂಜಾ ಭೀತಿ ಮಧ್ಯೆ ಹೆಚ್ಚುತ್ತಿದೆ ಕೋವಿಡ್ ಸೋಂಕಿತರ ಸಂಖ್ಯೆ