ಶಿವಮೊಗ್ಗ: ರಾಜ್ಯದಲ್ಲಿಯೇ ಮೊದಲ ಬಾರಿ ಶಿವಮೊಗ್ಗ (Shivamogga) ಕೇಂದ್ರ ಕಾರಾಗೃಹದಲ್ಲಿ ರಕ್ತದಾನ (Blood Donation) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಿವಮೊಗ್ಗ ಮಿಡ್‌ಟೌನ್ ರೋಟರಿ ಚ್ಯಾರಿಟಿ ಫೌಂಡೇಶನ್, ರೋಟರಿ ರಕ್ತನಿಧಿ, ಪ್ರಾದೇಶಿಕ ರಕ್ತ ಸಂಗ್ರಹಣಾ ಕೇಂದ್ರ, ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೇಂದ್ರ ಕಾರಾಗೃಹದ ಸಂಯುಕ್ತಾಶ್ರಯದಲ್ಲಿ ಕಾರಾಗೃಹದ ಸಂಜೀವಿನಿ ವಿಭಾಗದಲ್ಲಿ ರಕ್ತದಾನ ಶಿಬಿರ ಮತ್ತು ದಂತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ನ್ಯಾ.ಸಂತೋಷ್ ಮಾತನಾಡಿ, ಒಂದು ಚಾಕುವಿನಿಂದ ಹಣ್ಣುಗಳನ್ನು ಕತ್ತರಿಸಿ ತಿಂದು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು, ಅದೇ ಚಾಕುವನ್ನು ಬೇರೆ ಬೇರೆ ಅಪರಾಧ ಕೃತ್ಯಗಳಿಗೂ ಬಳಸಬಹುದು ಹಾಗೂ ಯಾವ ಕೆಲಸಕ್ಕೆ ಯಾವ ವಸ್ತುವನ್ನು ಬಳಸಬೇಕು ಎನ್ನುವುದು ನಮ್ಮ ವಿವೇಚನೆಯನ್ನು ಅವಲಂಬಿಸಿರುತ್ತದೆ ಎಂದು ಅಭಿಪ್ರಾಯ ಪಟ್ಟರು. ತಾನು ಸೂಜಿಯ ನೋವನ್ನು ಸಹಿಸಿಕೊಂಡು ಬೇರೊಂದು ಜೀವವನ್ನು ಉಳಿಸಲು ನೆರವಾಗುವ ಪುಣ್ಯಕಾರ್ಯಕ್ಕೆ ಕೈದಿಗಳೂ ಹೆಗಲು ಕೊಡುತ್ತಿರುವುದು ಸಮಾಜದ ಕಣ್ಣುತೆರೆಸುವ ಮಾದರಿ ಸೇವಾ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ. ರಂಗನಾಥ ಅವರು, ಜೈಲಿಗೆ ಬಂದವರು ತಾವು ಕೆಟ್ಟವರು ಎಂಬ ಹಣೆಪಟ್ಟಿಯನ್ನು ಹೊತ್ತು ಬಾಳಬೇಕಿಲ್ಲವೆಂದೂ, ಬಂಧಿಗಳಿಗೂ ಜೀವ ಉಳಿಸುವ ಶಕ್ತಿ ಹಾಗೂ ಸಾಮಾಜಿಕ ಜವಾಬ್ದಾರಿ ಇರುತ್ತದೆ ಎಂಬುದನ್ನು ಈ ಶಿಬಿರವು ಸಾಬೀತುಪಡಿಸಿದೆ ಎಂದು ತಿಳಿಸಿದರು.
ಜೈಲಿನಲ್ಲಿರುವವರ ಬಗ್ಗೆ ಸಮಾಜದಲ್ಲಿರುವ ನಕಾರಾತ್ಮಕ ಭಾವನೆಯನ್ನು ತಿದ್ದುವ ಪ್ರಯತ್ನಕ್ಕೆ ಬಂಧಿಗಳು ಮುನ್ನುಡಿ ಬರೆದಿದ್ದಾರೆ. ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ ನಂತರ ಬಂದಿಗಳ ಮುಖದಲ್ಲಿ ವಿಶೇಷವಾದ ಕಳೆ, ಸಮಾಧಾನ ಮತ್ತು ಸಂಭ್ರಮದ ಭಾವನೆಗಳು ಮೂಡಿಬಂದಿದ್ದನ್ನು ಅಧಿಕಾರಿಗಳು ಗುರುತಿಸಿದ್ದಾರೆ ಎಂದು ಅವರು ತಿಳಿಸಿದರು.
ಈ ರಕ್ತದಾನ ಮತ್ತು ದಂತ ತಪಾಸಣಾ ಶಿಬಿರದಲ್ಲಿ ಒಟ್ಟು 65 ಶಿಕ್ಷಾಬಂಧಿಗಳು ಹಾಗೂ 21 ಅಧಿಕಾರಿ-ಸಿಬ್ಬಂದಿಯವರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ್ದು, ಒಟ್ಟು 86 ಯೂನಿಟ್ ರಕ್ತವನ್ನು ಯಶಸ್ವಿಯಾಗಿ ಸಂಗ್ರಹಿಸಲಾಯಿತು. ರಕ್ತದಾನ ಮಾಡಲು ಇಚ್ಛಿಸಿದ ಬಂಧಿಗಳಿಂದ ಆರಂಭದಲ್ಲಿ ಕಡ್ಡಾಯವಾಗಿ ಒಪ್ಪಿಗೆ ಪತ್ರವನ್ನು ಪಡೆಯಲಾಗಿತ್ತು.
