ಸ್ಪೋರ್ಟ್ಸ್ ಬೈಕ್ ಅಪಘಾತವಾಗಿ ಸಿನಿಮಾ ವಿತರಕ ಸಾವು -ಸುದೀಪ್ ಸಂತಾಪ

Public TV
1 Min Read
AJAY 1

ಬೆಂಗಳೂರು: ಸ್ಪೋರ್ಟ್ಸ್ ಬೈಕ್ ಅಪಘಾತದಲ್ಲಿ ಸಿನಿಮಾ ವಿತರಕ ಮತ್ತು ಫೈನಾನ್ಶಿಯರ್ ಮೃತಪಟ್ಟಿದ್ದು, ನಟ ಸುದೀಪ್ ಕೂಡ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

ಅಜಯ್ ಚಂದಾನಿ (48) ಮೃತ ಸಿನಿಮಾ ವಿತರಕ. ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಭಾನುವಾರ ಸಂಜೆ ಈ ಅಪಘಾತ ಸಂಭವಿಸಿದೆ. ಅಜಯ್ ಚಂದಾನಿ ಅವರು ವಸಂತನಗರದ ಅಬ್ಶೂಟ್ ಲೇಔಟ್‍ನ ನಿವಾಸಿಯಾಗಿದ್ದು, ತಮ್ಮ ಸುಮಾರು 7.5 ಲಕ್ಷ ರೂ. ಮೌಲ್ಯದ ಸುಜುಕಿ ವಿ ಸ್ಟಾರ್ಮ್ 650 ಎಕ್ಸ್ ಟಿ ಸೂಪರ್ ಬೈಕಿನಲ್ಲಿ ಮನೆಯಿಂದ ಭಾನವಾರ ಹೊರಗಡೆ ಹೊರಟ್ಟಿದ್ದರು.

Capture 8

ಬೈಕನ್ನು ಅತಿ ವೇಗದಲ್ಲಿ ಓಡಿಸುತ್ತಿದ್ದರಿಂದ ಸುಮಾರು 6.30ಕ್ಕೆ ಇವರು ಕನ್ನಿಂಗ್ ಹ್ಯಾಂ ರಸ್ತೆಯ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಸಂಚಾರ ಪೊಲೀಸರು ಅಳವಡಿಸಿದ್ದ ಸೂಚನಾ ಫಲಕಕ್ಕೆ ಮೊದಲು ಡಿಕ್ಕಿ ಹೊಡೆದಿದೆ. ಬಳಿಕ ಅಲ್ಲೇ ಸಮೀಪದಲ್ಲಿದ್ದ ಹೂಡಿ ಅಪಾರ್ಟ್ ಮೆಂಟ್‍ನ ಕಾಂಪೌಂಡ್‍ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಗೋಡೆಯನ್ನು ಸೀಳಿ ಅಲ್ಲೇ ಸಿಕ್ಕಿಕೊಂಡಿದೆ. ಆದರೆ ಅಜಯ್ ಚಂದಾನಿ ಅಪಾರ್ಟ್ ಮೆಂಟ್‍ನ ಗ್ರೌಂಡ್‍ಗೆ ಹೋಗಿ ಬಿದ್ದಿದ್ದಾರೆ.

ತಕ್ಷಣ ಸ್ಥಳೀಯರು ಹೈಗ್ರೌಂಡ್ಸ್ ಸಂಚಾರಿ ಪೊಲೀಸರಿಗೆ ಮಾಹಿತಿ ತಿಳಿಸಿ ಅವರನ್ನು ಜೈನ್ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಬಿದ್ದ ರಭಸಕ್ಕೆ ತಲೆಗೆ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಕುರಿತು ಹೈಗ್ರೌಂಡ್ಸ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಅತಿದೊಡ್ಡ ಹಿಂದಿ ಚಲನಚಿತ್ರ ವಿತರಕರಲ್ಲಿ ಒಬ್ಬರಾಗಿದ್ದ ದಿವಂಗತ ಪಾಲ್ ಚಂದಾನಿ ಅವರ ಪುತ್ರ ಅಜಯ್ ಚಂದಾನಿಯಾಗಿದ್ದು, ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ. ಕರ್ನಾಟಕದಲ್ಲಿ ಹಿಂದಿ ಚಲಚಚಿತ್ರಗಳ ಪ್ರಮುಖ ವಿತರಕರಾಗಿದ್ದರು. ಇವರ ಸಾವಿನ ಬಗ್ಗೆ ತಿಳಿದು ನಟ ಸುದೀಪ್ ಅವರು ಕೂಡ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *