ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮೇಕ್ ಇನ್ ಇಂಡಿಯಾ ಯೋಜನೆಗೆ ಭಾರೀ ಉತ್ತೇಜನ ಸಿಕ್ಕಿದಂತಾಗಿದೆ. ಏಕೆಂದರೆ ಅಮೆರಿಕ ಜನರಲ್ ಎಲೆಕ್ಟ್ರಿಕ್ಸ್‌ನ ಏರೋಸ್ಪೇಸ್ ಆರ್ಮ್ (GE Aerospace), ಭಾರತದ ವಾಯುಪಡೆಗಾಗಿ ಫೈಟರ್ ಜೆಟ್ ಎಂಜಿನ್‌ಗಳನ್ನು (Fighter Jet Engines) ತಯಾರಿಸಲು ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನೊಂದಿಗೆ ಕೈಜೋಡಿಸುವುದಾಗಿ ಗುರುವಾರ ತಿಳಿಸಿದೆ.
ಅಧ್ಯಕ್ಷ ಜೋ ಬೈಡನ್ (Joe Biden) ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದು, ವಾಷಿಂಗ್ಟನ್‌ನಲ್ಲಿ ಜನರಲ್ ಎಲೆಕ್ಟ್ರಿಕ್ಸ್ ಅಧ್ಯಕ್ಷ ಹೆಚ್. ಲಾರೆನ್ಸ್ ಕಲ್ಫ್ ಜೂನಿಯರ್ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿದ ಕೆಲವೇ ಗಂಟೆಗಳಲ್ಲಿ ಘೋಷಣೆ ಹೊರಬಿದ್ದಿದೆ. ಮೋದಿ ಅವರು ಜೆಇ ಮುಖ್ಯಸ್ಥರೊಂದಿಗೆ ಈ ಕುರಿತು ಮಾತುಕತೆ ನಡೆದಿಸಿದ್ದಾರೆ.
ಭಾರತ ಮತ್ತು ಯುಎಸ್ ನಡುವಿನ ರಕ್ಷಣಾ ಸಹಕಾರ ಒಪ್ಪಂದ ಒಂದು ದೊಡ್ಡ ಮೈಲುಗಲ್ಲು. ಜೊತೆಗೆ ಉಭಯ ದೇಶಗಳ ರಕ್ಷಣಾ ಸಹಕಾರ ಬಲಪಡಿಸಲು ಇದು ಪ್ರಮುಖ ಹೆಜ್ಜೆಯಾಗಿರಲಿದೆ ಎಂದು ಜಿಇ ಏರೋಸ್ಪೇಸ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
‘ಜಿಇ ಏರೋಸ್ಪೇಸ್‌ನ F414 ಎಂಜಿನ್‌ಗಳನ್ನ ಭಾರತದಲ್ಲಿ ಜಂಟಿಯಾಗಿ ಉತ್ಪಾದಿಸುವ ಅಂಶ ಒಪ್ಪಂದದಲ್ಲಿದೆ. ಇದಕ್ಕಾಗಿ ಅಗತ್ಯ ರಫ್ತು ಮಾನ್ಯತೆಯನ್ನ ಪಡೆಯಲು ಯುಎಸ್ ಸರ್ಕಾರದೊಂದಿಗೆ ಜಿಇ ಏರೋಸ್ಪೇಸ್ ಕೆಲಸ ಮಾಡಲಿದೆ. ಈ ಪ್ರಯತ್ನವು ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ ಎಂಕೆ2 ಕಾರ್ಯಕ್ರಮದ ಭಾಗವಾಗಿದೆ ಎಂದು ಹೇಳಿದೆ.
ಈ ಕುರಿತು ಮಾತನಾಡಿದ ಲಾರೆನ್ಸ್ ಕಲ್ಫ್, ಇದೊಂದು ಐತಿಹಾಸಿಕ ಒಪ್ಪಂದವಾಗಿದೆ. ಎರಡೂ ರಾಷ್ಟ್ರಗಳ ನಡುವಿನ ನಿಕಟ ಸಮನ್ವಯತೆ ಸಾಧಿಸುವಲ್ಲಿ ನಾವು ಪ್ರಮುಖ ಪಾತ್ರ ವಹಿಸುತ್ತೇವೆ. ನಮ್ಮ F414 ಎಂಜಿನಿಗಳಿಗೆ ಸಾಟಿಯೇ ಇಲ್ಲ. ಇದರಿಂದ ಎರಡೂ ದೇಶಗಳಿಗೂ ಆರ್ಥಿಕ ಹಾಗೂ ರಾಷ್ಟ್ರೀಯ ಭದ್ರತೆಯ ಪ್ರಯೋಜನ ದೊರೆಯುತ್ತದೆ. ಅಲ್ಲದೇ ನಮ್ಮ ಗ್ರಾಹಕರಿಗೆ ಸಹಕರಿಸಲು ಹಾಗೂ ತಮ್ಮ ಮಿಲಿಟರಿ ನೌಕಾಪಡೆಯ ಅಗತ್ಯತೆಗಳನ್ನು ಪೂರೈಸಲು ಗುಣಮಟ್ಟದ ಎಂಜಿನ್‌ಗಳನ್ನು ಉತ್ಪಾದಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ.
ತೇಜಸ್‌ನ ಪ್ರಸ್ತುತ ರೂಪಾಂತರವು F404 ಎಂಜಿನ್‌ಗಳಿಂದ ಚಾಲಿತವಾಗಿರುವುದರಿಂದ ವಾಯುಪಡೆಯು ಜಿಇಯೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದೆ. ಆದ್ರೆ ಇದು ಎಷ್ಟರಮಟ್ಟಿಗೆ ಫಲಕಾರಿಯಾಗುತ್ತದೆ ಎಂಬುದನ್ನ ಕಾದುನೋಡಬೇಕಿದೆ.
ಜಿಇ ಏರೋಸ್ಪೇಸ್‌ನ ಎಫ್414 ಎಂಜಿನ್‌ಗಳು 5 ದಶಲಕ್ಷಕ್ಕೂ ಹೆಚ್ಚು ಗಂಟೆಗಳ ಹಾರಾಟ ನಡೆಸಿದೆ. 8 ರಾಷ್ಟ್ರಗಳು ಈ ಎಂಜಿನ್‌ಗಳನ್ನು ತಮ್ಮ ಸೇನಾ ವಿಮಾನಗಳಿಗೆ ಬಳಸುತ್ತಿವೆ. ಜಿಇ ಇಲ್ಲಿಯವರೆಗೆ ಜಾಗತಿಕವಾಗಿ 1,600 ಕ್ಕಿಂತ ಹೆಚ್ಚು ಎಫ್414 ಎಂಜಿನ್‌ಗಳನ್ನು ವಿತರಿಸಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.