ಶಿವಮೊಗ್ಗ: ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್, ಕೈ ಪಕ್ಷಕ್ಕೆ ಮತ್ತೊಂದು ಹೆಸರೇ ಭ್ರಷ್ಟಾಚಾರ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ 40% ಕಮಿಷನ್ ಸರ್ಕಾರ ಆರೋಪ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಆರೋಪದ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಭ್ರಷ್ಟಾಚಾರ ಹುಟ್ಟು ಹಾಕಿದ್ದೆ ಕಾಂಗ್ರೆಸ್, ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್, ಕೈ ಪಕ್ಷಕ್ಕೆ ಮತ್ತೊಂದು ಹೆಸರೇ ಭ್ರಷ್ಟಾಚಾರ. ಅವರ ಒಳ ಜಗಳ, ಗುಂಪುಗಾರಿಕೆಯಿಂದ ಕಾಂಗ್ರೆಸ್ ಸಂಪೂರ್ಣ ನಶಿಸಿ ಹೋಗಿದೆ. ಅದನ್ನು ಮರೆ ಮಾಚುವ ಸಲುವಾಗಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಉಪಯೋಗಿ ಅಲ್ಲ, ನಿರುಪಯೋಗಿ: ಮೋದಿ ಬಣ್ಣನೆಗೆ ಅಖಿಲೇಶ್ ಯಾದವ್ ಲೇವಡಿ

ಸಚಿವ ಭೈರತಿ ಬಸವರಾಜ್ ಭೂಮಿ ಖರೀದಿಯ ಆರೋಪದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಸವರಾಜ್ ಅವರು 19 ವರ್ಷದ ಹಿಂದೆ ಹಣ ಕೊಟ್ಟು ಭೂಮಿ ಖರೀದಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರೇ ಈ ಹಿಂದೆ ಈ ಪ್ರಕರಣಕ್ಕೆ ಬಿ-ರಿಪೋರ್ಟ್ ಹಾಕಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಸಚಿವರುಗಳನ್ನ ಅವರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಸೇರಿರುವವರನ್ನು ವಾಪಸ್ ಕಾಂಗ್ರೆಸ್ ಗೆ ಕರೆತರುವ ಸಲುವಾಗಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಈ ರೀತಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವವರು ಯಾವುದೇ ಕಾರಣಕ್ಕೂ ಅವರು ವಾಪಸ್ ಹೋಗುವುದಿಲ್ಲ. ಬಿಜೆಪಿಯ ತತ್ವ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಸೇರಿದ್ದಾರೆ. ಶಾಸಕರಾಗಿ, ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಹೀಗಾಗಿ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸಿಡಿದರು. ಇದನ್ನೂ ಓದಿ: ಲಕ್ನೋ ತಂಡದ ಮೆಂಟರ್ ಆಗಿ ಗೌತಮ್ ಗಂಭೀರ್ ನೇಮಕ
ಡಿ.ಕೆ.ರವಿ ಕೇಸ್ ಏನಾಯ್ತು, ಡಿವೈಎಸ್ ಪಿ ಗಣಪತಿ ಅವರು ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡರು. ಆ ಕೇಸ್ ಏನಾಯ್ತು? ಈ ಪ್ರಕರಣದಲ್ಲಿ ಸಾಕ್ಷ್ಯವನ್ನು ಸಂಪೂರ್ಣವಾಗಿ ನಾಶ ಮಾಡಿ ಸಿಬಿಐಗೆ ವಹಿಸಿದರು. ನಿಮ್ಮ ದೌರ್ಜನ್ಯ, ಭ್ರಷ್ಟಾಚಾರದಿಂದ ಎಷ್ಟೋ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡರು. ನಿಮ್ಮ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ನುಡಿದರು.

ಸಿ.ಟಿ.ರವಿ ವಿರುದ್ಧ ಡಿಕೆಶಿ ಆರೋಪದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಡಿಕೆಶಿ ಆತ್ಮಾವಲೋಕನ ಮಾಡಿಕೊಳ್ಳಲಿ. ಅವರ ಮೇಲೆ ಏನೇನು ಆರೋಪ ಇದೆ ಅಂತಾ ಆತ್ಮಾವಲೋಕನ ಮಾಡಿಕೊಂಡ ಮತ್ತೊಬ್ಬರ ಬಗ್ಗೆ ಮಾತನಾಡಿಕೊಳ್ಳಲಿ ಎಂದು ನುಡಿದರು.
ಶಾಸಕ ಯತ್ನಾಳ್ ಅವರು ತನಗೆ ಗೃಹ ಸಚಿವ ನೀಡಲಿ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಅವರು ನಮ್ಮ ಸ್ನೇಹಿತರು. ನಾವು ರಾಜಕಾರಣದಲ್ಲಿ ಒಂದೇ ಪಕ್ಷದಲ್ಲಿ ಇದ್ದೇವೆ. ಯತ್ನಾಳ್ ನನ್ನ ಆತ್ಮೀಯ ಸ್ನೇಹಿತರು. ಕೇಂದ್ರ ಸಚಿವರಾಗಿದ್ದವರು. ಅವರಿಗೆ ಮಂತ್ರಿ ಆಗಬೇಕು ಎಂಬ ಬಗ್ಗೆ ಆಸೆ, ಅಪೇಕ್ಷೆ ಇದೆ. ಅದನ್ನು ತಪ್ಪು ಎಂದು ಹೇಳುವುದಿಲ್ಲ. ಅವರಿಗೆ ನಾಳೆ ನೇರವಾಗಿಯೇ ಹೇಳುತ್ತೇನೆ ಎಂದರು.
ಯತ್ನಾಳ್ ಅವರೇ ಈ ರೀತಿ ಮಾಧ್ಯಮದ ಎದುರು ಹೇಳಿಕೆ ಕೊಡಬೇಡಿ. ಈ ರೀತಿ ಆರೋಪ ಮಾಡಿದರೆ ನಮ್ಮ ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗರ ಆಗುತ್ತದೆ. ನೀವು ಮಂತ್ರಿ ಆಗಬೇಕೆ, ನಾನು ಸಪೋರ್ಟ್ ಮಾಡುತ್ತೇನೆ ಇನ್ನು ಮುಂದೆ ಈ ರೀತಿ ಮಾತನಾಡಬಾರದು ಅಂತಾ ವಿನಂತಿ ಮಾಡುತ್ತೇನೆ ಎಂದು ಹೇಳಿದರು.






