ಚಿಕ್ಕಬಳ್ಳಾಪುರ: ಓಮ್ನಿ ಕಾರು (Omni Car) ಹಾಗೂ ಮಿನಿ ಗೂಡ್ಸ್ ವಾಹನದ (Goods Vehicle) ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮೂವರು ಮಹಿಳೆಯರು ದಾರುಣವಾಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆ ಶಿಡ್ಲಘಟ್ಟ (Sidlaghatta) ತಾಲೂಕಿನ ಕೊತ್ತನೂರು ಗೇಟ್ ಬಳಿ ನಡೆದಿದೆ.
ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ಕೊತ್ತನೂರು ಗೇಟ್ ಸಮೀಪ ಈ ದುರ್ಘಟನೆ ನಡೆದಿದೆ. ಚಿಂತಾಮಣಿ ತಾಲೂಕಿನ ಮಲ್ಲಿಕಾರ್ಜುನಪುರ ಗ್ರಾಮದ ರೂಪಾ (30), ರತ್ನಮ್ಮ (45) ಹಾಗೂ ಮುನಿಚೆನ್ನಮ್ಮ (40) ಮೃತಪಟ್ಟಿರುವ ದುರ್ದೈವಿಗಳು. ಮಲ್ಲಿಕಾರ್ಜುನಪುರ ಗ್ರಾಮದಿಂದ ಹುಜುಗೂರು ಗ್ರಾಮಕ್ಕೆ ಹೂ ಕಟಾವು ಕೆಲಸಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಓಮ್ನಿ ಕಾರಿನಲ್ಲಿ ಸುಮಾರು 10 ಮಂದಿ ಕೂಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಹೂ ಕಟಾವು ಕೆಲಸಕ್ಕಾಗಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ರಾಮಚಂದ್ರಪ್ಪ ಎಂಬವರ ಕಾರಿಗೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: Guwahati Murder | ಪತ್ನಿ ಕೊಂದು ಬೆರಳುಗಳು ಪೀಸ್ ಪೀಸ್ – ರುಂಡ ಕತ್ತರಿಸಿ ಫ್ರಿಜ್‌ನಲ್ಲಿಟ್ಟಿದ್ದ ಪತಿ!

ಅಪಘಾತದಲ್ಲಿ ಓಮ್ನಿ ಕಾರಿನ ಚಾಲಕ ಮನೋಜ್ ಸೇರಿದಂತೆ ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಶಿಡ್ಲಘಟ್ಟ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಚಾಲಕ ಮನೋಜ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೆಲ ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಪಕ್ಷದ ಹಿರಿಯರಿಗೆ ಹೀಗಾ ಅವಮಾನ ಮಾಡೋದು? – ಮಹದೇವಪ್ಪ ಪರ ಬ್ಯಾಟ್ ಬೀಸಿ ಬೈರತಿ ವಿರುದ್ಧ ಪ್ರತಾಪ್ ಕಿಡಿ
